ನವದೆಹಲಿ: ಲಿಬಿಯಾದಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ ನಾಲ್ವರು ಭಾರತೀಯರನ್ನು ಅಪಹರಿಸಿದ್ದ ಇಸಿಸ್ ಉಗ್ರ ಸಂಘಟನೆಯೊಂದಿಗೆ ಭಾರತ ವ್ಯವಹಾರ ನಡೆಸುತ್ತಿದೆಯಾ? ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.
ಲಿಬಿಯಾದಲ್ಲಿ ನಿನ್ನೆ ಇಸಿಸ್ ಉಗ್ರರು ಅಪಹರಿಸಿದ್ದ ಇಬ್ಬರು(ಕನ್ನಡಿಗರು)ಭಾರತೀಯರನ್ನು ಬಿಡುಗಡೆಗೊಳಿಸಿರುವುದು ಸಂತಸದ ವಿಚಾರ. ಅಲ್ಲದೆ ಉಳಿದಿಬ್ಬರ ಸುರಕ್ಷಿತ ಬಿಡುಗಡೆಗಾಗಿ ಪ್ರಾರ್ಥಿಸೋಣ. ಪ್ರಶ್ನೆ ಏನೆಂದರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇಸಿಸ್ ಉಗ್ರರ ಬಿಡುಗಡೆ ಮಾಡಿರುವ ಲಾಭ ಪಡೆಯುತ್ತಿದ್ದಾರೆ. ಹಾಗಿದ್ದರೆ ಭಾರತ ಲಿಬಿಯಾದಲ್ಲಿರುವ ಇಸಿಸ್ ಉಗ್ರರ ಜೊತೆ ವ್ಯವಹಾರ ನಡೆಸ್ತಿದೆಯಾ ಎಂದು ತಿವಾರಿ ಪ್ರಶ್ನಿಸಿದ್ದಾರೆ.
'ನಮ್ಮ ವಿದೇಶಾಂಗ ಸಚಿವರು ಲಿಬಿಯಾದ ಇಸಿಸ್ ಜತೆ ನೇರ ಸಂಪರ್ಕದ ಹಾಟ್‌ಲೈನ್‌ನಲ್ಲಿರುವುದರಿಂದ ಕೇಳುತ್ತಿದ್ದೇನೆ, ಲಿಬಿಯಾದಲ್ಲಿ ನಾಪತ್ತೆಯಾದ ಪಂಜಾಬ್ ಮೂಲದ 57 ಜನರ ಕತೆ ಏನಾಯಿತು? ಅವರು ಜೀವಂತವಿದ್ದಾರಾ ಮೃತರಾಗಿದ್ಧಾರಾ ವಿದೇಶಾಂಗ ಸಚಿವರೇ' ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿವಾರಿ ಕಟುವಾಗಿ ಪ್ರಶ್ನಿಸಿದ್ದಾರೆ.
ಇನ್ನು ಮನಿಶ್ ತಿವಾರಿಯ ಈ ವಿವಾದಾತ್ಮಕ ಟ್ವೀಟ್ ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತೀಯ ಜನತಾ ಪಕ್ಷ, ತಿವಾರಿ ಮಾತನಾಡುವ ರೀತಿ ಕೆಟ್ಟ ನಾಲಗೆಯ ಚಪಲದಂತಿದೆ. ಈ ರೀತಿ ಮಾತನಾಡುವುದನ್ನು ನಾವು ಪಾಕಿಸ್ತಾನದಲ್ಲಿ ಕಾಣುತ್ತೇವೆ. ಕಾಂಗ್ರೆಸ್ ಹಿರಿಯ ಮುಖಂಡನೊಬ್ಬ ಈ ರೀತಿ ಭಾಷೆ ಬಳಸುತ್ತಿರುವುದು ನಿಜಕ್ಕೂ ನನಗೆ ಅಚ್ಚರಿ ಮೂಡಿಸಿದೆ ಎಂದು ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಹೇಳಿದ್ದಾರೆ.