ದೇಶ

12ನೇ ತರಗತಿ ಪರೀಕ್ಷೆಯಲ್ಲಿ ಮಗನಿಗಿಂತ ಹೆಚ್ಚು ಅಂಕ ಗಳಿಸಿದ ತಾಯಿ

Lingaraj Badiger

ಗುವಾಹತಿ: ತಾಯಿಯನ್ನು ಗೆಲ್ಲಲು ಸಾಧ್ಯವಿಲ್ಲ ಎನ್ನುತ್ತಾರೆ. ಅದು ಪರೀಕ್ಷೆಯಲ್ಲೂ ನಿಜವಾಗಿದೆ. ಹೌದು ಅಸ್ಸಾಂನ ಮಹಿಳೆಯೊಬ್ಬರು ಅದನ್ನು ಸಾಧಿಸಿ ತೊರಿಸಿದ್ದಾರೆ.

37 ವರ್ಷದ ನಯನ್ಮೊನಿ ಬೆಝ್ಬರುಹ್ ಅವರು 12ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ತಮ್ಮ 18 ವರ್ಷದ ಅಂಕುರ್ಗಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಶೇ. 69.8ರಷ್ಟು ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಅಲ್ಲದೆ ಸಮಾಜಶಾಸ್ತ್ರದಲ್ಲಿ ಶೇ.80ರಷ್ಟು ಅಂಕ ಪಡೆದಿದ್ದಾರೆ.

ತಾನು ಹೆಚ್ಚು ಅಂಕ ಪಡೆದರೂ ಖುಷಿ ಪಡುವ ಸ್ಥಿತಿಯಲ್ಲಿ ಈ ತಾಯಿ ಇಲ್ಲ. ಏಕೆಂದರೆ, ಮಗನ ಫಲಿತಾಂಶ ನಯನ್ಮೊನಿಗೆ ಬೇಸರ ತರಿಸಿದೆ. ತಾಯಿ ಮಗ ಇಬ್ಬರೂ ರೆಗುಲರ್ ವಿದ್ಯಾರ್ಥಿಗಳಾಗಿ ತರಗತಿಗೆ ಹಾಜರಾಗಿದ್ದರು. ಆದರೆ ಪರೀಕ್ಷೆಯಲ್ಲಿ ಮಗ ಅಂಕುರ್ ತೃತೀಯ ಸ್ಥಾನದಲ್ಲಿ ಪಾಸಾಗಿದ್ದಾನೆ.

ಈ ಬಗ್ಗೆ ಇಂಡಿಯನ್ ಎಕ್ಸ್ಪ್ರೆಸ್ಗೆ ಪ್ರತಿಕ್ರಿಯಿಸಿದ ನಯನ್ಮೊನಿ, ನನಗೆ ಹೇಗೆ ಸಂತೋಷ ಆಗುತ್ತೆ ಹೇಳಿ? ನನ್ನ ಮಗನೂ ಉತ್ತಮ ಫಲಿತಾಂಶ ತೆಗೆದಿದ್ದರೆ ಸಹಜವಾಗಿ ಖುಷಿ ಆಗುತ್ತಿತ್ತು. ನಾವು ಯಾವಾಗಲು ಆತನ ಶ್ರೆಯಸ್ಸು ಬಯಸುತ್ತೇವೆ ಎಂದಿದ್ದಾರೆ.

'ನನಗೆ ಸಣ್ಣ ವಯಸ್ಸಿನಲ್ಲೇ ಮದುವೆಯಾಯಿತು. ಬಳಿಕ ಪುಸ್ತಕಗಳನ್ನು ಮೂಲೆಗೆ ಹಾಕಿ ಮರೆತು ಬಿಟ್ಟಿದ್ದೆ. ಆದರೆ ಮತ್ತೆ ಶಿಕ್ಷಣ ಮುಂದುವರೆಸಬೇಕು ಎಂಬ ಆಸೆ ಇತ್ತು. ಆದರೆ ಅದಕ್ಕೆ ನಮ್ಮ ಬಡತನ ಅಡ್ಡಿಯಾಗಿತ್ತು' ಎಂದು ನಯನ್ಮೊನಿ ಹೇಳಿದ್ದಾರೆ.

ಅಂಕುರ್ ತಂದೆ ತರಕಾರಿ ವ್ಯಾಪಾರಿಯಾಗಿದ್ದು, ಅಂಕುರ್ ಸಹ ಕುಟುಂಬದ ಬಡತನ ನೀಗಿಸಲು ತಂದೆಯೊಂದಿಗೆ ತರಕಾರಿ ಮಾರಲು ತೆರಳುತ್ತಿದ್ದ. ಕುಟುಂಬದಲ್ಲಿ ಆತನೆ ದೊಡ್ಡ ಮಗ.

ಗುವಾಹತಿಯಿಂದ 400 ಕಿ.ಮೀ ದೂರದಲ್ಲಿರುವ ದಿಬ್ರುಗಢ ಜಿಲ್ಲೆಯ ಮೊರನ್ನಲ್ಲಿ ಈ ಕುಟುಂಬ ವಾಸಿಸುತ್ತಿದ್ದು, ಕಾಲೇಜ್ಗೆ ತೆರಳಲು ನಯನ್ಮೊನಿ ನಿತ್ಯ 12 ಕಿ.ಮೀ ಸೈಕಲ್ ತುಳಿಯುತ್ತಿದ್ದಳು.

SCROLL FOR NEXT