ಇಂದೋರ್: ಹಾನಿಕಾರಕ ಅಂಶ ಪತ್ತೆಯಾದ ಹಿನ್ನಲೆಯಲ್ಲಿ ದೇಶಾದ್ಯಂತ ನಿಷೇಧ ಭೀತಿ ಎದುರಿಸುತ್ತಿರುವ ಮ್ಯಾಗಿ ನೂಡಲ್ಸ್ ಸೋಮಾರಿ ತಾಯಂದಿರ ಆಹಾರ ಎಂದು ಮಧ್ಯಪ್ರದೇಶದ ಬಿಜೆಪಿ ಶಾಸಕಿ ಉಷಾ ಠಾಕೂರ್ ಹೇಳಿದ್ದಾರೆ.
ಭಾನುವಾರ ತಮ್ಮ ಸ್ವಕ್ಷೇತ್ರ ಇಂದೋರ್ ನಲ್ಲಿ ಮ್ಯಾಗಿ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಉಷಾ ಠಾಕೂರ್, ದೇಶದ ಬಹುತೇಕ ತಾಯಂದಿರು ಸೋಮಾರಿಗಳಾಗಿದ್ದು, ಇದರಿಂದಲೇ ತಮ್ಮ ಮಕ್ಕಳಿಗೆ ಮ್ಯಾಗಿ ನೂಡಲ್ಸ್ ನಂತಹ ಸಿದ್ಧಾಹಾರಗಳನ್ನು ನೀಡುತ್ತಿದ್ದಾರೆ. ಹೊಸ ತಲೆಮಾರಿನ ತಾಯಂದಿರು ಸೋಮಾರಿಗಳಾಗಿದ್ದು, ಈ ಕಾರಣಕ್ಕಾಗಿಯೇ ಮಕ್ಕಳಿಗೆ ಮ್ಯಾಗಿಯಂತಹ ವಿಷ ಪದಾರ್ಥಗಳನ್ನು ತಿನ್ನಿಸುತ್ತಿದ್ದಾರೆ. ಇದರಿಂದಾಗಿಯೇ ಮ್ಯಾಗಿಯಂತಹ ಸಿದ್ದಾಹಾರಗಳ ವ್ಯಾಪಾರ ಹೆಚ್ಚಿದೆ ಎಂದು ಹೇಳಿದ್ದಾರೆ. ಅಲ್ಲದೆ ದೇಶದಲ್ಲಿ ಇಂತಹ ವಿಷ ಪದಾರ್ಥಗಳನ್ನು ನಿಷೇಧಿಸುವ ಅಗತ್ಯವಿತ್ತು ಎಂದು ಹೇಳುವ ಮೂಲಕ ಮ್ಯಾಗಿ ಮೇಲಿನ ನಿಷೇಧವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ವಿಷಕಾರಿ ಮಾನೋಸೋಡಿಯಂ ಗ್ಲುಟಮೇಟ್ ಮತ್ತು ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಸೀಸದ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ದೇಶದ 13 ರಾಜ್ಯಗಳಲ್ಲಿ ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್ ಉತ್ಪನ್ನಗಳ ಮೇಲೆ ನಿಷೇಧ ಹೇರಲಾಗಿದ್ದು, ಪಾಸ್ತಾ ಮತ್ತು ಮೆಕರೊನಿ ಉತ್ಪನ್ನಗಳನ್ನೂ ಪರೀಕ್ಷೆಗೊಳಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೆಹಲಿ, ಅಸ್ಸಾಂ, ಬಿಹಾರ್, ಮಧ್ಯಪ್ರದೇಶ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಮಹಾರಾಷ್ಟ್ರ, ಪಂಜಾಬ್, ಉತ್ತರಾಖಂಡ್‌ನಲ್ಲಿ ಆಹಾರ ಸುರಕ್ಷತೆ ನಿಟ್ಟಿನಲ್ಲಿ ಮ್ಯಾಗಿ ಮೇಲೆ ನಿಷೇಧ ಹೇರಲಾಗಿದೆ.
"ಮ್ಯಾಗಿ ಉತ್ಪನ್ನದಲ್ಲಿ ವಿಷಕಾರಿ ಅಂಶ ಪತ್ತೆಯಾದ ಹಿನ್ನಲೆಯಲ್ಲಿ ಆ ಸಂಸ್ಥೆಯ ಉತ್ಪನ್ನದ ಮೇಲೆ ನಿಷೇಧ ಹೇರಲಾಗಿದೆ. ಇದೇ ರೀತಿ ಉತ್ಪಾದನೆಯಾಗುತ್ತಿರುವ ಇತರೆ ಕಂಪನಿಗಳ ನೂಡಲ್ಸ್‌ಗಳನ್ನು ಪರೀಕ್ಷೆಗೊಳಪಡಿಸಲಿದ್ದೇವೆ ಎಂದು ಎಫ್‌ಎಸ್‌ಎಸ್‌ಎಐನ ಸಿಇಓ ಯದುವೀರ್ ಸಿಂಗ್ ಮಲಿಕ್ ತಿಳಿಸಿದ್ದಾರೆ.