ಸೂರ್ಯ ನಮಸ್ಕಾರ ಇಸ್ಲಾಂಗೆ ವಿರುದ್ಧವಾದದ್ದು, ಮುಸ್ಲಿಮರು ಅಲ್ಲಾನಿಗೆ ಮಾತ್ರ ತಲೆ ಬಾಗುವುದು ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಸೂರ್ಯ ನಮಸ್ಕಾರ ಕಡ್ಡಾಯ ಬೇಡ ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಆಗ್ರಹಿಸಿದೆ.
ಮುಸ್ಲಿಮರು ಕೇವಲ ಅಲ್ಲಾನಿಗೆ ಮಾತ್ರ ತಲೆಬಾಗುವುದು. ಅಲ್ಲದೇ ಸೂರ್ಯನಮಸ್ಕಾರ ಮಾಡಿದರೆ ಕೆಡುಕುಂಟಾಗುತ್ತದೆ ಎಂದು ವಾದಿಸಿರುವ ಸದಸ್ಯ ಕಮಲ್ ಫಾರೂಖಿ. ಇದರ ವಿರುದ್ಧ ಬೋರ್ಡ್ ಕೋರ್ಟ್ ಮೆಟ್ಟಿಲೇರಲಿದೆ ಎಂದು ತಿಳಿಸಿದ್ದಾರೆ.
ಯೋಗ ಹಾಗೂ ಸೂರ್ಯ ನಮಸ್ಕಾರದ ಬಗೆಗೆ ನಡೆಯುತ್ತಿರುವ ಚರ್ಚೆಯ ಬೆನ್ನ ಹಿಂದೆಯೇ ದಾರುಲ್ ಉಲೂಮ್ ನಡ್‍ವತುಲ್ ಉಲೆಮಾದಲ್ಲಿ 51 ಸದಸ್ಯರ ಸಭೆ ನಡೆದಿದ್ದು ಸೂರ್ಯ ನಮಸ್ಕಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಈ ಮುಸ್ಲಿಂ ಬೋರ್ಡ್ ಚರ್ಚಿಸಿ ಇದಕ್ಕೆ ವಿರೋಧ ವ್ಯಕ್ತಪಡಿಸುವ ನಿರ್ಣಯವನ್ನು ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಶ್ವಸಂಸ್ಥೆ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿದ ಬಳಿಕ ಇದೇ 21ರಂದು ದೆಹಲಿಯ ರಾಜಪಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ಮಾಡಿ ಜಗತ್ತಿಗೆ ಯೋಗದ ಪ್ರಾಮುಖ್ಯತೆಯನ್ನು ಸಾರುವ ಮೂಲಕ ಆರೋಗ್ಯಕರ ಸಮಾಜದ ನಿರ್ಮಾಣದ ಚಿಂತನೆ ನಡೆಸುತ್ತಿದ್ದರೆ ಮತ್ತೊಂದೆಡೆ ಮುಸ್ಲಿಂ ಸಂಘಟನೆಗಳು ಇದನ್ನು ವಿರೋಧಿಸಿವೆ.