ನವದೆಹಲಿ: ಬಿಹಾರ ಚುನಾವಣೆಯನ್ನು ಎನ್ ಡಿಎ ಜೊತೆ ಸೇರಿ ಎದುರಿಸುವುದಾಗಿ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದೂಸ್ತಾನಿ ಅವಮ್ ಮೋರ್ಚಾ ನಾಯಕ ಜಿತನ್ ರಾಮ್ ಮಂಜಿ ದೆಹಲಿಯಲ್ಲಿ ಗುರುವಾರ ಘೋಷಿಸಿದ್ದಾರೆ.
ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯನ್ನು ಒಟ್ಟಾಗಿ ಎದುರಿಸಲು ನಿರ್ಧರಿಸಿದ್ದೇವೆ. ಸೀಟು ಹಂಚಿಕೆ ಕುರಿತು ಇನ್ನೂ ನಿರ್ಧರಿಸಿಲ್ಲ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸೋಲಿಸಲು ಬಿಜೆಪಿಯೊಂದಿಗೆ ಸೇರಿಕೊಂಡಿರುವುದಾಗಿ ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ 50 ಸ್ಥಾನಗಳಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಜಿತನ್ ರಾಮ್ ಮುಂದಿಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಆದರೆ ಬಿಜೆಪಿ 30 ಸೀಟುಗಳನ್ನು ಮಾತ್ರ ನೀಡಲು ಒಲವು ವ್ಯಕ್ತಪಡಿಸಿದೆ ಎನ್ನಲಾಗುತ್ತಿದೆ. ಮಾದೇಪುರ ಸಂಸದ ಹಾಗೂ ಆರ್ ಜೆಡಿ ನಾಯಕ ಪಪ್ಪು ಯಾದವ್ ಬಿಜೆಪಿ ಸೇರುವ ಸಾಧ್ಯತೆಯಿದೆ.
ದಲಿತ ಸಮುದಾಯದಿಂದ ಬಂದಿರುವ ಜಿತನ್ ರಾಮ್ ಮಂಜಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ರಾಜ್ಯದಲ್ಲಿ ಶೇಕಡಾ 22ರಷ್ಟು ಮಂದಿ ದಲಿತರಿದ್ದು, ಆ ಸಮುದಾಯವನ್ನು ತಲುಪಿ ವಿಧಾನಸಭೆ ಪ್ರವೇಶಿಸಲು ಬಿಜೆಪಿಯು ಜಿತನ್ ರಾಮ್ ಅವರ ನೆರವು ಪಡೆದಿದೆ ಎನ್ನಲಾಗುತ್ತಿದೆ.