ಹೈದರಾಬಾದ್: ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಜಟಾಪಟಿ ಮುಂದುವರಿದಿದೆ. ಇದೀಗ ಹೈದರಾಬಾದ್ ನಲ್ಲಿ ಆಂಧ್ರ ಪೊಲೀಸರನ್ನು ತಮ್ಮ ರಕ್ಷಣೆಗೆಂದು ನಿಯೋಜಿಸಲು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ತೀರ್ಮಾನಿಸಿದ್ದಾರೆ. ಆಂಧ್ರ ಸಿಎಂ ನಾಯ್ಡು ವಿರುದ್ಧ ಪ್ರಕರಣ ದಾಖಲಿಸಲು ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಚಿಂತನೆ ನಡೆಸುತ್ತಿರುವ ಬೆನ್ನಲ್ಲೇ, ನಾಯ್ಡು ಅವರು ತಮ್ಮ ಹಾಗೂ ತಮ್ಮ ಸಚಿವ ಸಂಪುಟ ಸದಸ್ಯರ ರಕ್ಷಣೆಗಾಗಿ ಎರಡೂ ರಾಜ್ಯಗಳ ರಾಜಧಾನಿಯಾಗಿರುವ ಹೈದರಾಬಾದ್ ನಲ್ಲಿ ಆಂಧ್ರ ಪೊಲೀಸರನ್ನು ನಿಯೋಜಿಸುವ ತೀರ್ಮಾನಕ್ಕೆ ಬಂದಿದ್ದಾರೆ. 10 ವರ್ಷ ಕಾಲ ಈ ಎರಡೂ ರಾಜ್ಯಗಳಿಗೆ ಹೈದರಾಬಾದ್ ರಾಜಧಾನಿಯಾಗಿದ್ದು, ಈ ಹಿನ್ನೆಲೆಯಲ್ಲಿ ತಮ್ಮನ್ನು ತೆಲಂಗಾಣ ಪೊಲೀಸರು ಬಂಧಿಸದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ. ಇದೇ ವೇಳೆ ಮತಕ್ಕಾಗಿ ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಜೆರುಸಲೆಮ್ ಮುಥೈಯ್ಯ ಎಂಬಾತನಿಗೆ ಕೊಲೆ ಬೆದರಿಕೆ ಹಾಕಿದ ದೂರಿನ ಹಿನ್ನೆಲೆಯಲ್ಲಿ ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ವಿರುದ್ಧ ಆಂಧ್ರ ಪೊಲೀಸರು 87 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಕೈವಾಡ ಇರುವ ಬಗ್ಗೆ ತಪ್ಪೊಪ್ಪಿಕೊಳ್ಳುವಂತೆ ಒತ್ತಡ ತಂದಿದ್ದ ಕೆಸಿ ರಾವ್ ಅವರು ಜೀವ ಬೆದರಿಕೆ ಹಾಕಿದ್ದರು ಎಂದು ಜೆರುಸಲೆಮ್
ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಾಯ್ಡು ಬಂಧನಕ್ಕೆ ಸಿದ್ಧತೆ?: ಇದೇ ವೇಳೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮೇಲೆ ಮತಕ್ಕಾಗಿ ಲಂಚ ನೀಡಿದ ಪ್ರಕರಣದ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲು ಮಾಡಲು ತೆಲಂಗಾಣ ಸರ್ಕಾರ ಸಿದಟಛಿವಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದ್ದು, ಬಂಧನಕ್ಕೆ ಸಿದ್ಧತೆ ನಡೆಸಲಾಗಿದೆ ಎಂದೂ ಹೇಳಲಾಗುತ್ತಿದೆ. ಈ ಕಾರಣಕ್ಕೆ ನಾಯ್ಡು ತಮ್ಮ ಹಾಗೂ ಸಚಿವ ಸಂಪುಟ ಸದಸ್ಯರ ರಕ್ಷಣೆಗಾಗಿ ಈಗಾಗಲೇ ಪೊಲೀಸರನ್ನು ನಿಯೋಜಿಸಿಕೊಂಡಿದ್ದಾರೆ. ರಾಜ್ಯಪಾಲರಿಂದ ಮಾಹಿತಿ: ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಅವರು ದಿಡೀರ್ ಬೆಳವಣಿಗೆ ಬಗ್ಗೆ ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ ಐ.ವೈ.ಆರ್. ಕೃಷ್ಣರಾವ್ ಮತ್ತು ಡಿಜಿಪಿ ಜೆ.ವಿ. ರಾಮುಡು ಅವರಿಂದ ಮಾ ಹಿತಿ ಪಡೆದಿದ್ದಾರೆ. ಹೈದರಾಬಾದ್ ನಲ್ಲಿ ಸಿಎಂ ಹಾಗೂಸಂಪುಟ ಸದಸ್ಯರ ರಕ್ಷಣೆಗಾಗಿ ಪ್ರತ್ಯೇಕ ಆಂಧ್ರ ಪೊಲೀಸರ ನಿಯೋಜನೆ ಬಗ್ಗೆ ಕಾರಣ ಕೇಳಿದ್ದಾರೆ. ಅಲ್ಲದೆ, ತೆಲಂಗಾಣ ಡಿಜಿಪಿ ಅನುರಾಗ್ ಶರ್ಮಾ ಮತ್ತು ನಗರ ಪೊಲೀಸ್ ಆಯುಕ್ತ ಮಹೇಂದರ್ ರೆಡ್ಡಿ ಜತೆಗೂ ಚರ್ಚೆ ನಡೆಸಿದ್ದು, ಮುಂದಿನ ನಡೆ ಬಗ್ಗೆ ಕೇಳಿದ್ದಾರೆ.