ದೇಶ

ಕಾಜೋಲ್ ಪ್ರಸಾರ ಭಾರತಿ ಸದಸ್ಯೆ?

Sumana Upadhyaya

ನವದೆಹಲಿ:  ದಿಲ್ ವಾಲೆ ದುಲನಿಯಾ ಲೇ ಜಾಯೇಂಗೆ ಅನ್ನುವ ಸಿನಿಮಾದಲ್ಲಿ  ನಟಿಸಿ ಆ ಚಿತ್ರ ಇತಿಹಾಸ ನಿರ್ಮಿಸಿದ್ದು ನಮಗೆಲ್ಲ ಗೊತ್ತೇ ಇದೆ. ಈಗ  ನಟಿ ಕಾಜೋಲ್ ''ದಿಲ್ ವಾಲೇ ದೂರದರ್ಶನ್ ಲೇ ಜಾಯೇಂಗೇ'' ಅಂತ ಹೇಳಲು ಹೊರಡುವ ಹಾಗಿದೆ.

ಪ್ರಸಾರ ಭಾರತಿ ಮಂಡಳಿಗೆ ಕಾಜೋಲ್ ಹೆಸರನ್ನು ಕೇಂದ್ರ ಸರ್ಕಾರ  ಘೋಷಿಸಿದೆ.
ದೂರದರ್ಶನ ಚಾನೆಲ್ ನ್ನು ಇತರ ಖಾಸಗಿ ಚಾನೆಲ್ ಗಳ ಜೊತೆ ಸರಿಸಾಟಿ ಮಾಡಲು ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ದೂರದರ್ಶನದ ರೂಪುರೇಷೆಗಳನ್ನು ಪುನರ್ರಚಿಸಿ ವಾಣಿಜ್ಯ ಮಟ್ಟದಲ್ಲಿ ಬೆಳೆಯುವಂತೆ ಮಾಡಲು ಕಾಜೋಲ್  ಅವರನ್ನು ಪ್ರಸಾರ ಭಾರತಿ ಮಂಡಳಿ ಸದಸ್ಯೆಯಾಗಿ ಕರೆತರಲು ನಿರ್ಧರಿಸಿದೆ ಎನ್ನಲಾಗುತ್ತಿದೆ.

ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ ಮಂಡಳಿಯ ನಾಲ್ಕು ಮಂದಿ ಸದಸ್ಯರ ಅರೆಕಾಲಿಕ ಹುದ್ದೆಗೆ ಏಳು ಜನ ಸದಸ್ಯರ ಹೆಸರನ್ನು ಸೂಚಿಸಿ ಗೃಹ ಇಲಾಖೆಗೆ ಕಳುಹಿಸಿದ್ದು, ಅವರಲ್ಲಿ ನಾಲ್ವರ ಹೆಸರನ್ನು ಸೂಚಿಸಿ ಇಂದು ಅದಕ್ಕೆ ಅನುಮೋದನೆ ನೀಡಿದೆ.

ಇನ್ನು  ಆ ಪಟ್ಟಿ ಉಪ ರಾಷ್ಟ್ರಪತಿ ಬಳಿಗೆ ಹೋಗಿ ಅವರು ನಾಲ್ಕು ಮಂದಿಯ ಹೆಸರನ್ನು ಅಂತಿಮಗೊಳಿಸಲಿದ್ದಾರೆ. ಪಟ್ಟಿಯಲ್ಲಿ ಖ್ಯಾತ ಭಜನ್ ವಾದಕ ಅನೂಪ್ ಜಲೊಟ, ಅಶೋಕ್ ಟಂಡನ್  ಮತ್ತು ಹಿರಿಯ ಪತ್ರಕರ್ತ ಮಿನಝ್ ಮರ್ಚೆಂಟ್ ಅವರ ಹೆಸರುಗಳೂ ಇವೆ.  ಉಪ ರಾಷ್ಟ್ರಪತಿಗಳು ವಾರ್ತಾ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಮತ್ತು  ಪತ್ರಿಕಾ ಮಂಡಳಿ ಅಧ್ಯಕ್ಷರ  ಜತೆ ಸೇರಿ ಸಭೆ ನಡೆಸಿ ಅಂತಿಮ ಹೆಸರುಗಳನ್ನು ಘೋಷಿಸಲಿದ್ದಾರೆ.

ಚಿತ್ರರಂಗದಲ್ಲಿರುವ ಪ್ರಮುಖ ವೃತ್ತಿಪರ ನಟಿಯೊಬ್ಬರನ್ನು ಸೇರಿಸಿಕೊಂಡರೆ  ದೂರದರ್ಶನದ ಆಕರ್ಷಣೆ  ಹೆಚ್ಚುತ್ತದೆ. ಕಾಜೋಲ್ ನೇಮಕಗೊಂಡರೆ ಇದೇ ಮೊದಲ ಸಲ ಒಬ್ಬರು ನಟಿ ಪ್ರಸಾರ ಭಾರತಿ ಮಂಡಳಿ ಸದಸ್ಯರಾದಂತಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT