ನವದೆಹಲಿ: ಅಖಿಲ ಭಾರತ ಪೂರ್ವ ವೈದ್ಯಕೀಯ ಪರೀಕ್ಷೆಯನ್ನು 4 ನಾಲ್ಕು ವಾರದಲ್ಲಿ ನಡೆಸಲು ಸಾಧ್ಯವಿಲ್ಲ ಎಂದು ಸಿಬಿಎಸ್ ಸಿ ಆಡಳಿತ ಮಂಡಳಿ ಗುರುವಾರ ಹೇಳಿದೆ.
ಮೇ. 3 ರಂದು ನಡೆದ ಅಖಿಲ ಭಾರತ ವೈದ್ಯಕೀಯ ಪೂರ್ವ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಪರೀಕ್ಷೆಯನ್ನೇ ರದ್ದುಗೊಳಿಸಿದ ಸುಪ್ರೀಂಕೋರ್ಟ್ ನಾಲ್ಕು ವಾರಗಳಲ್ಲಿ ಮತ್ತೆ ಹೊಸದಾಗಿ ಪರೀಕ್ಷೆ ನಡೆಸುವಂತೆ ಸೋಮವಾರ ಸಿಬಿಎಸ್ ಸಿ ಗೆ ಆದೇಶ ನೀಡಿತ್ತು.
ಈ ಆದೇಶವನ್ನು ತಿರಸ್ಕರಿಸಿರುವ ಸಿಬಿಎಸ್ ಸಿ ಆಡಳಿತ ಮಂಡಳಿಯು ನಾಲ್ಕು ವಾರದಲ್ಲಿ ಮರುಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಆಡಳಿತ ಮಂಡಳಿಯು ಈಗಾಗಲೇ ನಿರಂತರವಾಗಿ 7 ಪರೀಕ್ಷೆಗಳನ್ನು ನಡೆಸಿದೆ. ಇದೀಗ ವೈದ್ಯಕೀಯ ಪೂರ್ವ ಪ್ರವೇಶ ಮರು ಪರೀಕ್ಷೆಯನ್ನು ನಾಲ್ಕುವಾರದೊಳಗಾಗಿ ಮಾಡಲು ಸಾಧ್ಯವಾಗುವುದಿಲ್ಲ. ಮರುಪರೀಕ್ಷೆ ಮಾಡಲು ಕನಿಷ್ಟ ಎಂದರೂ 3 ತಿಂಗಳು ಬೇಕು ಎಂದು ಹೇಳಿದೆ.
ಮೇ 3 ರಂದು ನಡೆದ ಅಖಿಲ ಭಾರತ ವೈದ್ಯಕೀಯ-ಪೂರ್ವ ಪ್ರವೇಶ ಪರೀಕ್ಷೆ (ಎಐಪಿಎಂಟಿ)ಯ ಪ್ರಶ್ನೆ ಪತ್ರಿಕೆಗಳು ಬಿಹಾರ, ಜಾರ್ಖಂಡ್, ರಾಜಸ್ಥಾನ, ಹರಿಯಾಣ ಸೇರಿದಂತೆ ಇನ್ನಿತರೆ ರಾಜ್ಯಗಳಲ್ಲಿ ಮೊಬೈಲ್ ಮೂಲಕ ಬಹಿರಂಗವಾಗಿದ್ದವು. ಪ್ರಕರಣದ ಅರ್ಜಿದಾರರಲ್ಲೊಬ್ಬರಾದ ಪ್ರಶಾಂತ್ ಭೂಷಣ್ ಫಲಾನುಭವಿಗಳನ್ನು ಕಂಡುಹಿಡಿಯುವುದು ಕಷ್ಟಕರವಾದ್ದರಿಂದ ಮರುಪರೀಕ್ಷೆ ನಡೆಸುವುದೇ ಒಳಿತು ಎಂದು ಸಲಹೆ ನೀಡಿದ್ದರು.
ಸಿಬಿಎಸ್ಇ ಜೂನ್ 5 ರಂದು ಅಖಿಲ ಭಾರತ ವೈದ್ಯಕೀಯ-ಪೂರ್ವ ಪ್ರವೇಶ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಬೇಕಿತ್ತು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆಯಾದ್ದರಿಂದ ಫಲಿತಾಂಶ ಪ್ರಕಟಿಸದಂತೆ ಸುಪ್ರೀಂಕೋರ್ಟ್ ಮಾಧ್ಯಮಿಕ ಶಿಕ್ಷಣದ ಕೇಂದ್ರೀಯ ಮಂಡಳಿಗೆ ಸೂಚನೆ ನೀಡಿತ್ತು. ಪ್ರಕರಣದ ತನಿಖೆ ಅಧಿಕ ಸಮಯ ತೆಗೆದುಕೊಳ್ಳಲಿದ್ದು, ಇದರಿಂದಾಗಿ ವಿದ್ಯಾರ್ಥಿಗಳ ಪರಿಣಾಮ ಬೀರುತ್ತದೆ ಎಂದು ತನ್ನ ಅನಿಸಿಕೆ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್ ಜೂ.15 ರಂದು ಪರೀಕ್ಷೆಯನ್ನೇ ರದ್ದುಗೊಳಿಸಿ ಮರು ಪರೀಕ್ಷೆ ನಡೆಸುವಂತೆ ಸಿಬಿಎಸ್ ಸಿ ಆಡಳಿತ ಮಂಡಳಿಗೆ ಆದೇಶ ನೀಡಿತ್ತು.