ನವದೆಹಲಿ: ಜೂ.21 ರಂದು ನಡೆದ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು ಹಾಗೂ ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು. ಆದರೆ ದೇಶದ ಉಪರಾಷ್ಟ್ರಪತಿಗಳಿಗೆ ಯೋಗ ದಿನಾಚರಣೆಯ ಆಹ್ವಾನ ಹೋಗಿರಲಿಲ್ಲವಂತೆ!
ಯೋಗ ದಿನಾಚರಣೆಯಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಭಾಗವಹಿಸದೇ ಇರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಬಿಜೆಪಿ ನಾಯಕ ರಾಮ್ ಮಾಧವ್ ಪ್ರಶ್ನಿಸಿದ್ದರು. ಆದರೆ ಅವರ ಪ್ರಶ್ನೆ ಸರ್ಕಾರಕ್ಕೆ ಮುಳುವಾಗಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಮೀದ್ ಅನ್ಸಾರಿ ಅವರಿಗೆ ಆಹ್ವಾನವೇ ಹೋಗಿರಲಿಲ್ಲ ಎಂದು ಉಪರಾಷ್ಟ್ರಪತಿಗಳ ಕಚೇರಿ ಸ್ಪಷ್ಟಪಡಿಸಿದೆ.
ಹಮೀದ್ ಅನ್ಸಾರಿ ಅವರ ಅನುಪಸ್ಥಿತಿಯನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದ ರಾಮ್ ಮಾಧವ್, ಆ ನಂತರ ಅದನ್ನು ಡಿಲೀಟ್ ಮಾಡಿ ಉಪರಾಷ್ಟ್ರಪತಿಗಳ ಆರೋಗ್ಯ ಸರಿಯಾಗಿಲ್ಲದ ಕಾರಣ ಅವರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿಲ್ಲ ಎಂದು ತಿಳಿದುಬಂದಿದೆ. ಅವರ ಅನುಪಸ್ಥಿತಿಯನ್ನು ಪ್ರಶ್ನಿಸಿದ್ದಕ್ಕೆ ಕ್ಷಮೆ ಕೋರುತ್ತೇನೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದರು.
ಆದರೆ ಹಮೀದ್ ಅನ್ಸಾರಿ ಅವರು ಆರೋಗ್ಯದ ಕಾರಣದಿಂದ ಯೋಗ ಕಾರ್ಯಕ್ರಮಕ್ಕೆ ಗೈರುಹಾಜರಿಯಾಗಿಲ್ಲ, ಹಾಜರಾಗುವುದಕ್ಕೆ ಅವರಿಗೆ ಆಹ್ವಾನವೇ ಬಂದಿಲ್ಲ ಎಂದು ಉಪರಾಷ್ಟ್ರಪತಿಗಳ ಕಚೇರಿ ಸ್ಪಷ್ಟಪಡಿಸಿದೆ.
ಕಾರ್ಯಕ್ರಮ ನಡೆಯುವ ಇಲಾಖೆ ಸಚಿವರು ಆಹ್ವಾನ ನೀಡಿದರೆ ಮಾತ್ರ ಉಪರಾಷ್ಟ್ರಪತಿಗಳು ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಶಿಷ್ಟಾಚಾರವಾಗಿದೆ.
ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಅಧಿಕಾರವನ್ನು ನಿಯಂತ್ರಿಸುವ ರಾಜ್ಯಸಭಾ ಚಾನಲ್ ವಿರುದ್ಧವೂ ಬಿಜೆಪಿ ನಾಯಕ ರಾಮ್ ಮಾಧವ್ ಆಕ್ಷೇಪ ವ್ಯಕ್ತಪಡಿಸಿದ್ದು ಯೋಗ ಡೇ ನೇರ ಪ್ರಸಾರದ ತೆಗೆದು ಹಾಕಿದ್ದನ್ನು ಪ್ರಶ್ನಿಸಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ರಾಜ್ಯಸಭಾ ಟಿವಿಯ ಸಿಇಒ, ಗುರುದೀಪ್ ಸಿಂಗ್, ರಾಮ್ ಮಾಧವ್ ಅವರ ಆರೋಪ ಸುಳ್ಳು ಎಂದು ಹೇಳಿದ್ದಾರೆ.
ಯೋಗ ದಿನದ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡುವುದರೊಂದಿಗೆ ಯೋಗಕ್ಕೆ ಸಂಬಂಧಿಸಿದ 3 ಸಾಕ್ಷ್ಯಚಿತ್ರಗಳನ್ನೂ ಮಾಡಿರ್ವುದಾಗಿಯೂ ಅವರು ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ ವಿಷಯ ಟ್ರೆಂಡ್ ಆಗುತ್ತಿದ್ದ ವೇಳೆ ರಾಮ್ ಮಾಧವ್ ತಮ್ಮ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಾರೆ.