ನವದೆಹಲಿ: ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ದಿನಕ್ಕೊಂದು ವಿವಾದ ಸೃಷ್ಟಿಸುತ್ತಿದ್ದು, ಇದೀಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕ ಗಾಂಧಿ ಹಾಗೂ ಅವರ ಪತಿ ರಾಬರ್ಟ್ ವಾದ್ರಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದೆ ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪಾಳೆಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ.
ಗಾಂಧಿ ಕುಟುಂಬವನ್ನು ಲಂಡನ್‌ನಲ್ಲಿ ಭೇಟಿಯಾಗಿದ್ದು ಸಂತಸ ತಂದಿದೆ. ರೆಸ್ಟೊರೆಂಟ್‌ವೊಂದರಲ್ಲಿ ಪ್ರಿಯಾಂಕ ಗಾಂಧಿ ಹಾಗೂ ಅವರ ಪತಿ ವಾದ್ರಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದೆ. ಅವರು ಟಿಮ್ಮಿ ಸರ್ಣಾ ಜೊತೆಗಿದ್ದರು. ಟಿಮ್ಮಿ ಬಳಿ ನನ್ನ ಫೋನ್ ನಂಬರ್ ಇದೆ. ಅವರು ನನಗೆ ಕರೆ ಮಾಡಬಹುದು. ಅವರ ಬಗ್ಗೆ ನನ್ನ ನಿಜಭಾವನೆಯನ್ನು ನಾನು ತಿಳಿಸುತ್ತೇನೆ. ಯಾವ ವಿಷಯವನ್ನೂ ಮುಚ್ಚಿಡುವುದಿಲ್ಲ. ಯಾವುದೇ ಒಪ್ಪಂದವನ್ನೂ ಮಾಡಲ್ಲ. ಆದರೆ ಅವರು ಆಡಿದ ಆಟಗಳಿಂದ ಈಗ ನನಗೆ ಸಂತಸವಾಗಿದೆ ಅನ್ನೋದನ್ನ ತಿಳಿಸಿಬಿಡಿ. ನನ್ನ ನೆನಪಿನ ಶಕ್ತಿ ಸರಿಯಾಗಿದ್ರೆ, ಅದು ಕಳೆದ ವರ್ಷ ಹಾಗೂ ಅದರ ಹಿಂದಿನ ವರ್ಷ ಎಂದು ಲಲಿತ್ ಮೋದಿ ಟ್ವೀಟ್ ಮಾಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಲಲಿತ್ ಮೋದಿ ಮಾತು ಬಾಲಿಶವಾಗಿದೆ. ಆತನಿಗೆ ನಾವು ಯಾವ ಸಹಾಯವನ್ನೂ ಮಾಡಿಲ್ಲ. ಲಲಿತ್ ಮೋದಿಯಿಂದ ವಿಷಯಾಂತರ ಮಾಡುವ ಯತ್ನ ನಡೆಯುತ್ತಿದೆ. ಈ ಬಗ್ಗೆ ಪ್ರಧಾನಿ ಮೋದಿ ಮೌನ ಮುರಿಯಬೇಕು ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹೇಳಿದ್ದಾರೆ.