ಬೀಜಿಂಗ್: ಚೀನಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗುರುವಾರ ಅಲ್ಲಿನ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಿದ್ದಾರೆ.
ಮುಂಬೈ ದಾಳಿ ಸಂಚುಕೋರ ಝಕೀವುರ್ ರೆಹಮಾನ್ ಲಖ್ವಿ ವಿಚಾರದಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ನಿರ್ಧಾರಕ್ಕೆ ತಡೆಯೊಡ್ಡಿದ ಚೀನಾದ ನಿಲುವಿನ ಬಗ್ಗೆಯೂ ಸುಷ್ಮಾ ಪ್ರಸ್ತಾಪಿಸಿದ್ದಾರೆ. ಜತೆಗೆ, 'ಇಂತಹ ಕ್ರಮವು ಎರಡೂ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿಸ ಬಹುದು. ಲಖ್ವಿ ಸಾಮಾನ್ಯ ಉಗ್ರನಲ್ಲ. ಆತನ ಸಂಚಿನಲ್ಲಿ ನಡೆದ ಮುಂಬೈ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದಾರೆ'' ಎಂದೂ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಲಖ್ವಿ ವಿಚಾರದಲ್ಲಿ ಮೌನ ಮುರಿದ ಚೀನಾ, 'ವಿಶ್ವಸಂಸ್ಥೆಯ ಸಮಿತಿ ಪ್ರಸ್ತಾಪಿಸುವ ಉಗ್ರ ಕೃತ್ಯ ಸಂಬಂಧಿ ವಿಚಾರಗಳ ಬಗ್ಗೆ ಭಾರತ, ಚೀನಾ ಮತ್ತು ಸಂಬಂಧಪಟ್ಟ ದೇಶವು ಪರಸ್ಪರ ಮಾತನಾಡಿಕೊಳ್ಳುವುದು ಉತ್ತಮ'' ಎಂದಿದೆ. ಜತೆಗೆ, ಚೀನಾ ಎಲ್ಲ ರೀತಿಯ ಉಗ್ರವಾದವನ್ನೂ ವಿರೋಧಿಸುತ್ತದೆ ಎಂದಿದೆ.