ನವದೆಹಲಿ: ಐಪಿಎಲ್ ಹಗರಣದ ಆರೋಪ ಎದುರಿಸುತ್ತಿರುವ ಲಲಿತ್ ಮೋದಿ ಪಾಸ್‍ಪೋರ್ಟ್ ವಿವಾದಕ್ಕೆ ಸಂಬಂಧಿಸಿದ ಮಾಹಿತಿ ಕೇಳಿ ಸಲ್ಲಿಸಲಾಗಿದ್ದ ಆರ್‍ಟಿಐ ಅರ್ಜಿಗೆ ಉತ್ತರಿಸಲು ವಿದೇಶಾಂಗ ಸಚಿವಾಲಯ ನಿರಾಕರಿಸಿದೆ.
ಮೋದಿ ಅವರಿಗೆ ಪಾಸ್ ಪೋರ್ಟ್ ವಾಪಸ್ ನೀಡುವ ದೆಹಲಿ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸದಿರುವ ನಿರ್ಧಾರ ತೆಗೆದುಕೊಂಡವರು ಯಾರು ಸೇರಿದಂತೆ ಒಟ್ಟು ಏಳು ಪ್ರಶ್ನೆಗಳಿಗೆ ಮಾಹಿತಿ ಕೇಳಿ ಹರಿಯಾಣದ ರಾಯೋ ಎಂಬವರು ವಿದೇಶಾಂಗ ಸಚಿವಾಲಯ (ಎಂಇಎ)ಕ್ಕೆ ಈ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ ಅರ್ಜಿಯ ಮೊದಲ ಮೂರು ಪ್ರಶ್ನೆಗಳಿಗೆ ಆರ್‍ಟಿಐನಡಿ ಉತ್ತರಿಸಲು ಸಾಧ್ಯವಿಲ್ಲ ಎಂದಿದೆ. ಜತೆಗೆ, ಉಳಿದ ನಾಲ್ಕು ಪ್ರಶ್ನೆಗಳ ಉತ್ತರ ವಿದೇಶಾಂಗ ಸಚಿವಾಲಯದ ಬಳಿ ಇಲ್ಲ ಎಂದು ಸ್ಪಷ್ಟೀಕರಣ ನೀಡಿದೆ. ಆದರೆ, ಈ ಅರ್ಜಿಯನ್ನು ರಾಯಭಾರ, ಪಾಸ್ ಪೋರ್ಟ್ ಹಾಗೂ ವೀಸಾ ವಿಭಾಗಕ್ಕೂ ಕಳುಹಿಸಿಕೊಡಲಾಗಿ ಹೇಳಿದೆ.
ಸಚಿವಾಲಯದ ಈ ನಡೆ ಪ್ರತಿಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ. ಇದು ಆರ್‍ಟಿಐ ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದರೆ, ಮೋದಿ ಸರ್ಕಾರವು ಪಾರದರ್ಶಕತೆಗೆ ಕೊಡಲಿ ಏಟು ನೀಡಿದೆ ಎಂದು ಸಿಪಿಎಂ ಆರೋಪಿಸಿದೆ.
ಹುದ್ದೆ ಬಿಡಿ ಎಂಬ ಆಡ್ವಾಣಿ ಹೇಳಿಕೆಗೆ ಪ್ರತಿಪಕ್ಷಗಳ ಬೆಂಬಲ
ಕಳಂಕ ಬಂದರೆ ಹುದ್ದೆ ಬಿಡಿ ಎನ್ನುವ ಆಡ್ವಾಣಿ ಅವರ ಹೇಳಿಕೆಗೂ ಬೆಂಬಲ ವ್ಯಕ್ತಪಡಿಸಿರುವ ಪ್ರತಿಪಕ್ಷಗಳು, ಲಲಿತ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸುಷ್ಮಾ ಹಾಗೂ ರಾಜೇ ರಾಜಿನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಹಿರಿಯ ಮುಖಂಡ ಆಡ್ವಾಣಿ ಅವರು ಕಳಂಕಿತರಿಗೆ ಸ್ಪಷ್ಟ ಸಂದೇಶರವಾನಿಸಿದ್ದಾರೆ. ರಾಜಿನಾಮೆ ನೀಡುವಂತೆ ಪರೋಕ್ಷವಾಗಿ ಸೂಚಿಸಿದ್ದಾರೆ. ಜನ ಹೇಳುತ್ತಿರುವುದನ್ನೇ ಆಡ್ವಾಣಿ ಹೇಳಿದ್ದಾರೆ. ಆದರೆ, ಪ್ರಧಾನಿ ಮಾತ್ರ ಈ ವಿಚಾರಕ್ಕೆ ಸಂಬಂಧಿಸಿ ಮೌನವಹಿಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕ ಪಿ.ಸಿ. ಚಾಕೋ ಹೇಳಿದ್ದಾರೆ.