ಚೆನ್ನೈ: ನಿನ್ನ ತಂದೆ ಅತ್ಯಾಚಾರಿ ಎಂದು ಒಂದು ದಿನ ನನ್ನ ಮಗಳಿಗೆ ಹೇಳುತ್ತೇನೆ...! ಹದಿನಾಲ್ಕು ವರ್ಷದಲ್ಲೇ ಅತ್ಯಾಚಾರಕ್ಕೊಳಗಾಗಿ ಯಾರಿಗೂ ಬೇಡದ ತಾಯಿಯಾಗಿರುವ ತಮಿಳುನಾಡಿನ ಕಡಲೂರು ಸಮೀಪದ ಯುವತಿ ಆಕ್ರೋಶದಿಂದ ಹೇಳುವ ಮಾತಿದು.
2008ರಲ್ಲಿ ಈಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಈಗ ಆಕೆಯ ಜತೆಗೆ ಪೋಷಕರೂ ಇಲ್ಲ. ಸಣ್ಣವಯಸ್ಸಿನಲ್ಲೇ ತಾಯಿಯಾಗಿರುವ ಆಗಿನ ಬಾಲಕಿಗೆ ಈಗ 21 ವರ್ಷ. ಕಡಲೂರಿನಿಂದ 80 ಕಿ.ಮೀ. ದೂರದ ಗ್ರಾಮವೊಂದರ ಒಂದೇ ಕೊಠಡಿಯಲ್ಲಿ ಬಾಡಿಗೆ ತಾಯಿಯಾಗಿ ಜೀವನ ದೂಕುತ್ತಿದ್ದಾಳೆ. ತನ್ನ ಮೇಲೆ ಅತ್ಯಾಚಾರ ನಡೆದು ಆರು ವರ್ಷವಾಗಿದ್ದರೂ ಆ ಘಟನೆಯನ್ನು ಈವರೆಗೂ ಮರೆಯಲು ಸಾಧ್ಯವಾಗುತ್ತಿಲ್ಲ.
ಯುವತಿಯ ಯಾತನಾಮಯ ಜೀವನದ ಬಗ್ಗೆ ಖಾಸಗಿ ಪತ್ರಿಕೆಯೊಂದು ಭಾನುವಾರ ವರದಿ ಮಾಡಿದೆ. ನ್ಯಾಯಾಧೀಶರಿಗೆ ನಾನು ಇಷ್ಟು ವರ್ಷ ಅನುಭವಿಸಿದ ಯಾತನೆಯ ಅರಿವಿದೆಯೇ?
ಅತ್ಯಾಚಾರದ ಬಳಿಕ ನಾನು ತಾಯಿಯಾಗಿರುವುದು ಆಕೆಗೆ ಗೊತ್ತಿದೆ. ಈಗ ಅವರು ಅತ್ಯಾಚಾರಿಯ ಜತೆಗೆ ಮದುವೆಯಾಗುವಂತೆ ಸೂಚಿಸಿದ್ದಾರೆ. ಅವರ ಈ ಆದೇಶ ನನ್ನನ್ನು ಮತ್ತೆ ಅದೇ ಯಾತನೆಗೆ ದೂಕಲಿದೆ.
ಅತ್ಯಾಚಾರಕ್ಕೊಳಗಾದ ಈ ಯುವತಿ ಪ್ರಸ್ತಾಪಿಸುತ್ತಿರುವ ನ್ಯಾಯಾಧೀಶ ಮದ್ರಾಸ್ ಹೈಕೋರ್ಟ್‍ಗೆ ಸೇರಿದವರು. ಇತ್ತೀಚೆಗೆ ನ್ಯಾಯಾಧೀಶ ಡಿ. ದೇವದಾಸ್ ಅವರು ಅತ್ಯಾಚಾರ ಮಾಡಿದ ವ್ಯಕ್ತಿಗೆ ಜಾಮೀನು ನೀಡಿದ್ದರು. ಅತ್ಯಾಚಾರಕ್ಕೊಳಗಾದ ಯುವತಿ ಜತೆಗೆ ಮದುವೆ ಸಂಧಾನಕ್ಕೆ ಅವಕಾಶ ಮಾಡಿಕೊಡಲು ಜಾಮೀನು ನೀಡಿದ್ದರು. ಇದಕ್ಕೆ ಯುವತಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ.