ದೇಶ

ಉತ್ತರದಲ್ಲೂ ಮುಂಗಾರು ರಭಸ

ನವದೆಹಲಿ/ಡೆಹ್ರಾಡೂನ್/ಬೆಂಗಳೂರು: ಉತ್ತರ ಭಾರತಾದ್ಯಂತ ಕೂಡ ಮುಂಗಾರು ಮಳೆ ರಭಸಗೊಂಡಿದೆ. ಧಾರಾಕಾರ ಮಳೆ ಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಕ್ಷೇತ್ರ ವಾರಾಣಸಿ ಭೇಟಿ ರದ್ದು ಮಾಡಿದ್ದಾರೆ.

ಗಾಜಿಪುರ ಮತ್ತು ಅಹಮ್ಮದಾಬಾದ್‍ನಲ್ಲಿ ಭಾರಿ ಮಳೆಯಾಗಿದೆ. ಮತ್ತೊಂದೆಡೆ ಉತ್ತರಾ ಖಂಡದಲ್ಲಿ ಮಳೆ ಪರಿಸ್ಥಿತಿ ಸುಧಾರಣೆಯಾಗಿಲ್ಲ ಭಾನುವಾರ ರಕ್ಷಣಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬದರೀನಾಥ ಮತ್ತು ಹೇಮಕುಂಡ ಸಾಹಿಬ್‍ನಿಂದ 1 ಸಾವಿರ ಮಂದಿಯನ್ನು ರಕ್ಷಿಸಲಾಗಿದೆ. ಮತ್ತೊಂದೆಡೆ, ಉತ್ತರಾಖಂಡ ಪ್ರವಾಹದಲ್ಲಿ ಸಿಲುಕಿದ್ದ ಮೈಸೂರು, ಚಾಮರಾಜನಗರ ಜಿಲ್ಲೆಗಳ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿ ತವರಿನತ್ತ ಪ್ರಯಾಣ ಆರಂಭಿಸಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚೆಲುವರ ಸಿನಕೊಪ್ಪಲು ಗ್ರಾಮದ 19 ಮಂದಿ ಬದರೀನಾಥದ ಮಠದಲ್ಲಿ ಆಶ್ರಯ ಪಡಕೊಂಡಿದ್ದಾರೆ. ಹೊಸಪೇಟೆ ತಾಲೂಕಿನಲ್ಲಿ ಬಿಎಸ್‍ಎನ್‍ಎಲ್‍ನಲ್ಲಿ ಅಧಿಕಾರಿಯಾಗಿರುವ ಶ್ಯಾಮಸುಂದರ ಮತ್ತು ಪತ್ನಿ ಶ್ರೀಲಕ್ಷ್ಮೀ, ಮಕ್ಕಳಾದ ಮೃದುಲಾ, ಸುಮೇದ, ಸುಮನಾ ಬದರೀನಾಥ ಸಮೀಪ ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡಿದೆ. ಅವರನ್ನು ರಕ್ಷಿಸಬೇಕೆಂದು ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ. ಯಾತ್ರೆಗೆ ಅಡ್ಡಿ: ವ್ಯಾಪಕ ಮಳೆಯಾದಿಂದಾಗಿ ಚಾರ್ ಧಾಮ್ ಯಾತ್ರೆಗೆ ಅಡ್ಡಿ ಉಂಟಾಗಿದೆ. ಚಮೋಲಿ ಜಿಲ್ಲೆಯಲ್ಲಿ ಹೇಮಕುಂಡ್ ಸಾಹಿಬ್ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮತ್ತು ರಸ್ತೆ ಪ್ರವಾಹಕ್ಕೆ ಕೊಚ್ಚಿ ಹೋಗಿರುವುದರಿಂದ ಸಂಪರ್ಕ ಕಡಿತಗೊಂಡಿದೆ. ಬದರೀನಾಥದಲ್ಲಿ ಸಿಕ್ಕಿ ಹಾಕಿ ಕೊಂಡಿರುವ ಪ್ರವಾಸಿಗರನ್ನು ಬೇನಾಕುಲಿ, ಜೋಶಿಮಠ್, ಲಾಂಬಾ ಗಢಕ್ಕೆ ಕರೆತರಲಾಗುತ್ತಿದೆ.

ರಾಜ್ಯಕ್ಕೆ ಹಿಂತಿರುಗುತ್ತಿದ್ದಾರೆ:

ಇಂಡೋ - ಟಿಬೆಟನ್ ಬಾರ್ಡರ್ ಸಮೀಪ ಭಾರಿ ಭೂಕುಸಿತ ಉಂಟಾಗಿ ಸಂಪರ್ಕ ಇಲ್ಲದೆ ಇಲ್ಲಿ ಸಿಕ್ಕಿಹಾಕಿಕೊಂಡಿದ್ದ  ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ 25 ಮಂದಿ ಹರಿದ್ವಾರದ ಮೂಲಕ ಶನಿವಾರ ರಾತ್ರಿ ದೆಹಲಿ ತಲುಪಿದ್ದಾರೆ.ಭಾನುವಾರ ದೆಹಲಿಯಿಂದ ಮೈಸೂರಿಗೆ ರೈಲಿನ್ಲ್ಲಿ ಪ್ರಯಾಣ ಬೆಳಿಸಿದ್ದಾರೆ. ಈ ತಂಡದಲ್ಲಿ ಉತ್ತರ ಭಾರತ ಪ್ರವಾಸ ಕೈಗೊಂಡಿದ್ದ ಚಾಮುಂಡಿಬೆಟ್ಟದ ಪ್ರಧಾನ ಆಗಮಿಕ ಶಶಿಶೇಖರ ದೀಕ್ಷಿತ್ ಮತ್ತು ಅವರ ಕುಟುಂಬ, ನಗರದ ಅರಮನೆ ಪುರೋಹಿತ ಶ್ರೀಹರಿ ದೀಕ್ಷಿತ್ ಮತ್ತು ಅವರ ಕುಟುಂಬ, ಚಾಮರಾಜನಗರ ನಗರಸಭೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಗಣೇಶ ದೀಕ್ಷಿತ್ ಮತ್ತು ಅವರ ಕುಟುಂಬವೂ ಇದೆ.

SCROLL FOR NEXT