ಪ್ರಮುಖ ನಗರಗಳಲ್ಲಿ ಬಿಸಿಗಾಳಿ
ನವದೆಹಲಿ: ಬೆಂಗಳೂರು ಸೇರಿದಂತೆ ಭಾರತದ 5 ಪ್ರಮುಖ ನಗರಗಳಲ್ಲಿ 2020ರ ವೇಳೆಗೆ ಬಿಸಿಗಾಳಿಯು ಅತಿಹೆಚ್ಚು ಮಂದಿ ಯನ್ನು ಬಲಿತೆಗೆದುಕೊಳ್ಳಲಿದೆ.
ಐಐಎಂ ಅಹಮದಾಬಾದ್, ಐಐಟಿ ಗಾಂಧಿನಗರ ಮತ್ತು ಇಂಧನ, ಪರಿಸರ ಮತ್ತು ಜಲಮಂಡಳಿ ಜಂಟಿಯಾಗಿ ನಡೆಸಿದ ಅಧ್ಯಯನವು ಈ ಆತಂಕಕಾರಿ ಅಂಶವನ್ನು ಬಹಿರಂಗ ಪಡಿಸಿದೆ. ಅಹಮದಾಬಾದ್, ಕೋಲ್ಕತಾ, ಬೆಂಗಳೂರು, ದೆಹಲಿ ಮತ್ತು ಮುಂಬೈನಲ್ಲಿ 2020ರ ವೇಳೆಗೆ ಬಿಸಿಗಾಳಿಯಿಂದಾಗಿ ಗರಿಷ್ಠ ಸಂಖ್ಯೆಯ ಜನ ಮೃತಪಡುವ ಸಾಧ್ಯತೆಯಿದೆ ಎಂದು ಈ ಅಧ್ಯಯನ ತಿಳಿಸಿದೆ. ಇದಕ್ಕಾಗಿ ಭಾರತದ ವೈವಿಧ್ಯ ಹವಾಮಾನವಿರುವ ಹಾಗೂ 10 ಲಕ್ಷದಷ್ಟು ಜನಸಂಖ್ಯೆಯಿರುವ 52 ನಗರ ಪ್ರದೇಶ ಗಳನ್ನು ಆಯ್ದು ಕೊಳ್ಳಲಾಗಿತ್ತು ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.
``ನಮ್ಮ ಜನಪ್ರತಿನಿಧಿಗಳು ಹವಾಮಾನ ಬದಲಾವಣೆಗೆ ಏನು ಮಾಡಬೇಕೆಂದು ಯೋಜನೆ ರೂಪಿಸಬೇಕು ಮತ್ತು ಪ್ರತಿಕ್ರಿಯಿಸುವಂತಾಗಬೇಕು. ನಾವು ದೈನಂದಿನ ಸಾವು, ಹವಾಮಾನ, ಆರ್ದ್ರತೆ ಮತ್ತು ಮಾಲಿನ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅಂಕಿಅಂಶದ ಮಾದರಿಯನ್ನು ಸಿದ್ಧಪಡಿಸಿ ದ್ದೇವೆ. ಈ ಮೂಲಕ ತಾಪಮಾನ ಬದಲಾವಣೆಗೆ ಅನುಗುಣವಾಗಿ ಸಾವಿನ ರಿಸ್ಕ್ ಹೇಗೆ ಬದಲಾಗುತ್ತದೆ ಎಂದು ಕಂಡು ಕೊಂಡಿದ್ದೇವೆ'' ಎಂದು ಅಧ್ಯಯನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ.ಎಂ.ಎಚ್. ಧೊಲಾಕಿಯಾ ತಿಳಿಸಿದ್ದಾರೆ.