ನವದೆಹಲಿ: ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಅವರಿಗೆ ವೀಸಾ ಕೊಡಿಸುವುದಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಇಗ್ಲೆಂಡ್ ನ ಉನ್ನತ ಆಯುಕ್ತ ಜೇಮ್ಸ್ ಬೇವನ್ ಅವರೊಂದಿಗೆ ಮಾತುಕತೆ ನಡೆಸಿರುವ ವಿವರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಅವರು, ಲಲಿತ್ ಮೋದಿ ಅವರಿಗೆ ವೀಸಾ ಕೊಡಿಸುವುದರ ಸಂಬಂಧ ಸುಷ್ಮಾ ಮತ್ತು ಬ್ರಿಟಿಷ್ ನ ಉನ್ನತ ಆಯುಕ್ತ ಜೇಮ್ಸ್ ಬೇವನ್ ಅವರೊಂದಿಗೆ ನಡೆಸಿದಂತ ಮಾತುಕತೆ ವಿವರಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ದಾಖಲಾಗಿರುತ್ತದೆ. ಈ ದಾಖಲೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಒತ್ತಡ ಹೇರಿದ್ದಾರೆ.
ಸುಷ್ಮಾ ಸ್ವರಾಜ್ ಅವರು ಜೇಮ್ಸ್ ಅವರೊಂದಿಗೆ ಮಾತುಕತೆ ನಡೆಸಿದ ದೂರವಾಣಿ ಸಂಭಾಷಣೆಯನ್ನು ಹಾಗೂ ಭಾರತೀಯ ಜನತಾ ಪಕ್ಷದ ಕೇಂದ್ರ ಸಚಿವರ ಸಂಬಂಧಿಗಳು ಲಲಿತ್ ಮೋದಿ ಅವರ ಸಹಾಯದಿಂದ ಉದ್ಯೋಗ ಪಡೆದುಕೊಂಡಿದ್ದರೆ, ಅದರ ವಿವರಗಳನ್ನೂ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.