ಬೆಂಗಳೂರು: ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳ ಪರ ವಕೀಲ ಎಂ.ಎಲ್ ಶರ್ಮಾರಿಗೆ ಬೆಂಗಳೂರಿನ ಯುವತಿ ಮೌಮಿತಾ ಪಾಲ್ ಎಂಬುವರು ಪತ್ರ ಬರೆದಿದ್ದು, ತಾಕತ್ತಿದ್ದರೆ ತನ್ನನ್ನು ಬಂದು ರೇಪ್ ಮಾಡುವಂತೆ ಸವಾಲು ಹಾಕಿದ್ದಾಳೆ. ಈ ಪತ್ರ ಇದೀಗ ಸಂಚಲನ ಮೂಡಿಸಿದೆ.
ಇತ್ತೀಚಿಗೆ ಬಂದ ಇಂಡಿಯಾಸ್ ಡಾಟರ್ ಡಾಕ್ಯುಮೆಂಟರಿಯಲ್ಲಿ ಶರ್ಮಾ ಅವರು ನಿರ್ಭಯಾ ವಿರುದ್ಧ ಮಾತಾನಾಡಿದ್ದು ಹಲವರ ಕೋಪಕ್ಕೆ ಕಾರಣವಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿ ಪತ್ರ ಬರೆದಿರುವ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಪಾಲ್, ತಾಕತ್ತಿದ್ದರೆ ಬಂದು ನನ್ನನ್ನು ರೇಪ್ ಮಾಡಿ ಎಂದು ಸವಾಲು ಹಾಕಿದ್ದಾರೆ.
24 ವರ್ಷದ ಯುವತಿ ನಾನು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದೀನಿ, ‘ನಾನು ಆಫೀಸಿನಲ್ಲೇ ಸತತ 5 ದಿನಗಳ ಕಾಲ ಉಳಿದಿದ್ದೇನೆ’, ‘ರಾತ್ರಿ ವೇಳೆ ಮನೆಯಿಂದ ಹೊರಗೆ ಕಳೆದಿದ್ದೇನೆ’, ‘ ರೇಪಿಸ್ಟ್’ಗಳು ದೇಶಾದ್ಯಂತ ಸುತ್ತಿ ಹೆಣ್ಮಕ್ಕಳನ್ನು ರೇಪ್ ಮಾಡಬೇಕಾ..?? ಬಂದು ನನ್ನನ್ನು ರೇಪ್ ಮಾಡಿ ಎಂದು ವಕೀಲ ಶರ್ಮಾರಿಗೆ ಮೌಮಿತಾ ಪಾಲ್ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
2012ರ ಡಿಸೆಂಬರ್ 16ರ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ್ದ ಮತ್ತು ಬಿಬಿಸಿ ಸಾಕ್ಷ್ಯ ಚಿತ್ರದಲ್ಲಿ ಆಕ್ಷೇಪಾರ್ಹವಾಗಿ ಮಹಿಳಾ ವಿರೋಧಿ ಹೇಳಿಕೆಗಳನ್ನು ನೀಡಿದ್ದ ವಕೀಲ ಎಂ.ಎಲ್ ಶರ್ಮಾರಿಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಶೋಕಾಸ್ ನೊಟೀಸ್ ಜಾರಿ ಮಾಡಿತ್ತು.