ನವದೆಹಲಿ: ಆಮ್ ಆದ್ಮಿ ಪಕ್ಷದ ಮಾಜಿ ಶಾಸಕಿ ಶಾಸಕಿ ಅಂಜಲಿ ದಮಾನಿಯಾ ಅವರು ಪಕ್ಷಕ್ಕೆ ಬುಧವಾರ ರಾಜಿನಾಮೆ ನೀಡಿದ್ದಾರೆ.
ಆಪ್ ನ ಮಾಜಿ ಶಾಸಕ ರಾಜೇಶ್ ಗಾರ್ಗ್ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಡುವಿನ ರಹಸ್ಯ ಆಡಿಯೋ ಟೇಪ್ ಬಿಡುಗಡೆಯಾದ ಬೆನ್ನಲ್ಲೇ ಅಂಜಲಿ ದಮಾನಿಯಾ ಅವರು ಆಪ್ ಗೆ ರಾಜಿನಾಮೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನು ಕಳೆದ ಹಲವು ದಿನಗಳಿಂದ ಆಪ್ ಪಕ್ಷದಲ್ಲಿ ಭುಗಿಲೆದ್ದಿರುವ ಭಿನ್ನಮತ ಮತ್ತೆ ಸುದ್ದಿ ಮಾಡುತ್ತಿದ್ದು, ಅರವಿಂದ್ ಕೇಜ್ರಿವಾಲ್ ಅವರು ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದ್ದರು ಎಂದು ಅಂಜಲಿ ದಮಾನಿಯಾ ಅವರು ಆರೋಪಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಂಜಲಿ ದಮಾನಿಯಾ ಅವರು, ನಾನು ಅರವಿಂದ್ ಕೇಜ್ರಿವಾಲ್ ಅವರ ತ್ವತ್ವಾದರ್ಶಗಳನ್ನು ಪಾಲಿಸುತ್ತೇನೆಯೇ ಹೊರತು, ಅವರ ಕುದುರೆ ವ್ಯಾಪಾರವನ್ನಲ್ಲ ಎಂದು ಕಿಡಿಕಾರಿದ್ದಾರೆ. ಇನ್ನು 2014 ದೆಹಲಿ ಚುನಾವಣೆ ವೇಳೆ ನಡೆದಿದೆ ಎನ್ನಲಾಗುತ್ತಿರುವ ರಾಜೇಶ್ ಗಾರ್ಗ್ ಮತ್ತು ಅರವಿಂದ್ ಕೇಜ್ರಿವಾಲ್ ಅವರ ದೂರವಾಣಿ ಸಂಭಾಷಣೆ ಬಹಿರಗವಾದ ಬೆನ್ನಲ್ಲೇ ಅಂಜಲಿ ದಮಾನಿಯಾ ಅವರು ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಟೆಲಿಫೋನ್ ದೂರವಾಣಿಯ ಆಡಿಯೋ ಟೇಪ್ ನಲ್ಲಿ ಸಾಕಷ್ಟು ವಿಚಾರಗಳನ್ನು ಚರ್ಚಿಸಲಾಗಿದೆ.
ದೆಹಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅರವಿಂದ್ ಕೇಜ್ರಿವಾಲ್ ಅವರು, ಕಾಂಗ್ರೆಸ್ ಶಾಸಕರನ್ನು ಪಕ್ಷದತ್ತ ಸೆಳೆದರೆ ತಮ್ಮ ಅಧಿಕಾರದ ಮಾರ್ಗ ಸುಗಮವಾಗುತ್ತದೆ ಎಂದು ರಾಜೇಶ್ ಸಲಹೆ ನೀಡಿದ್ದರಂತೆ. ಹೀಗಾಗಿ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲೇ ಬೇಕು ಹವಣಿಸಿದ್ದ ಕೇಜ್ರಿವಾಲ್, ಕಾಂಗ್ರೆಸ್ ಪಕ್ಷದ ಶಾಸಕರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.
ಒಟ್ಟಾರೆ ಅಧಿಕಾರದ ಚುಕ್ಕಾಣಿ ಹಿಡಿದರೂ ಆಪ್ ಪಕ್ಷದಲ್ಲಿ ಮಾತ್ರ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.