ನವದೆಹಲಿ: ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಅರವಿಂದ್ ಕೇಜ್ರಿವಾಲ್ ಗೈರು ಹಾಜರಾಗುತ್ತಿರುವುದಕ್ಕೆ ಕಿಡಿಕಾಡಿರುವ ದೆಹಲಿ ನ್ಯಾಯಾಲಯ, ಇಂದು ಮಧ್ಯಾಹ್ನ 2 ಗಂಟೆಯೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಕೇಜ್ರಿವಾಲ್ ಗೆ ಮಂಗಳವಾರ ಸೂಚಿಸಿದೆ.
ಅಲ್ಲದೇ, ಪ್ರಕರಣ ಸಂಬಂಧ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಎಎಪಿ ನಾಯಕ ಯೋಗೇಂದ್ರ ಯಾದವ್ ಅವರಿಗೂ ಗೈರು ಹಾಜರಿಗೆ ಕಾರಣ ನೀಡದೆ ಇಂದು ಮಧ್ಯಾಹ್ನದೊಳಗೆ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಆದೇಶಿಸಿದೆ.
ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ವಿಚಾರಣೆ ನಡೆಸಬೇಕಾದರೆ, ಪ್ರಕರಣದ ಆರೋಪಿಗಳು ಹಾಜರಿರಬೇಕು. ಗೈರು ಹಾಜರಿಗೆ ನೆಪ ಹೇಳದೆ, ನ್ಯಾಯಾಲಯದ ಆದೇಶವನ್ನು ಪಾಲಿಸಿ ಎಂದು ಸೂಚಿಸಲಾಗಿದೆ.
ವಕೀಲರು ಪ್ರತಿಭಟನೆ ಕೈಗೊಂಡಿದ್ದು, ವಾದ ಮಂಡಿಸಲು ಗಡುವು ನೀಡಬೇಕೆಂದು ಕೇಜ್ರಿವಾಲ್, ಸಿಸೋಡಿಯಾ ಮತ್ತು ಯೋಗೇಂದ್ರ ಯಾದವ್ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದರು.
ದೆಹಲಿಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ನೀಡುವುದಾಗಿ ಹೇಳಿ ತಮ್ಮ ವಿರುದ್ಧ ಪಿತೂರಿ ನಡೆಸಿ ವಂಚಿಸಿದ್ದಾರೆ ಎಂದು ದೂರಿ ವಕೀಲ ಸುರೇಂದ್ರ ಕುಮಾರ್ ಶರ್ಮಾ ಎಂಬುವವರು ಮೂವರ ವಿರುದ್ಧ ಮಾನನಷ್ಟ ಮೊಕದ್ದಮೆ ಸಲ್ಲಿಸಿದ್ದರು.
ಪ್ರಕರಣ ಸಂಬಂಧ ದೆಹಲಿ ಹೈಕೋರ್ಟ್ ಕೇಜ್ರಿವಾಲ್, ಸಿಸೋಡಿಯಾ ಮತ್ತು ಯೋಗೇಂದ್ರ ಯಾದವ್ ಅವರಿಗೆ ಜಾಮೀನು ನೀಡಿತ್ತು.