ಮುಂಬೈ: ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳ ಪರ ವಕೀಲ ಎಂ.ಎಲ್ ಶರ್ಮಾರ ವಿರುದ್ಧ ಸಿಡಿದೆದ್ದು ತೆಲುಗು ನಟಿ ಸೋನಿಯಾ ದೀಪ್ತಿ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿ, ಎಲ್ಲರನ್ನು ಹುಬ್ಬೆರಿಸಿದ್ದರು. ಅದೇ ರೀತಿ ಮುಂಬೈ ಯುವತಿಯರ 'ಬಾಂಬ್‌ಬೇಬ್ಸ್# ರಾಪ್ ಆಗೇನೆಸ್ಟ್ ರೇಪ್' ವಿಡಿಯೋ ಯೂಟ್ಯೂಬ್‌ನಲ್ಲಿ ಸಂಚಲನ ಮೂಡಿಸಿದೆ.
ಮುಂಬೈನ ಉಪೇಕ್ಷಾ ಜೈನ್ ಹಾಗೂ ಪಂಖುರಿ ಅವಸ್ತಿ ಅವರು ಸೋಮವಾರ ಪೋಸ್ಟ್ ಮಾಡಿರುವ ಯೂಟ್ಯೂಬ್ ವಿಡಿಯೋವನ್ನು ಸುಮಾರು ೩೦ ಸಾವಿರ ಸಲ ವೀಕ್ಷಿಸಲಾಗಿದೆ. ಯಾವುದೇ ಮುಚ್ಚುಮರೆ ಇಲ್ಲದೇ ದೇಶದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹೇಳಿದ್ದೇವೆ ಎಂದು ವಿಡಿಯೋ ಆರಂಭಕ್ಕೂ ಮೊದಲು ಘೋಷಿಸಿದ್ದಾರೆ.
'ಅತ್ಯಾಚಾರದ ನೆಲೆಬೀಡು ಎಂಬ ಕುಖ್ಯಾತಿ ನಮ್ಮದು. ಈ ಹಣೆಪಟ್ಟಿ ಬಂದದ್ದು ಹೇಗೆಂದು ಎಂದಾದರೂ ಯೋಚಿಸಿದ್ದೀರಾ,' ಎಂದು ಅವರು ಪ್ರಶ್ನಿಸಿದ್ದಾರೆ. ದೇಶದಲ್ಲಿ ಮಹಿಳೆಯರನ್ನು ಯಾವ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿರುವ ಯುವತಿಯರು, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಸ್ತ್ರೀ ದ್ವೇಷ, ವೇಶ್ಯಾವಾಟಿಕೆ ಎಂಬ ಫಲಕಗಳನ್ನು ವಿಡಿಯೋದಲ್ಲಿ ಪ್ರದರ್ಶಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಮಾಡುವ ಬದಲು ಈ ಬಗ್ಗೆ ಕ್ರಮ ಕೈಗೊಳ್ಳಲು ಯುವತಿಯರು ಕರೆ ನೀಡಿದ್ದಾರೆ. 'ಟ್ವೀಟ್ ನಿಲ್ಲಿಸಿ, ವರ್ಷಗಳಿಂದ ಜನರ ಮನಸ್ಸಿನಲ್ಲಿ ಬೇರೂರಿರುವ ಭಾವನೆ ಬದಲಿಸಲು ಮುಂದಾಗಿ,' ಎಂದಿದ್ದಾರೆ. 'ನಾವು ರಾಪರ್‌ಗಳಲ್ಲ- ಅಲ್ಲ. ನಿಮ್ಮ ಕಣ್ಣು ತೆರೆಸಲು ಪ್ರಯತ್ನಿಸಿರುವ ಹುಡುಗಿಯರು,' ಎಂದು ತಮ್ಮನ್ನು ಬಣ್ಣಿಸಿಕೊಂಡಿದ್ದಾರೆ.
ಕೆಲವರು ಯೂಟ್ಯೂಬ್ ಮೂಲಕ ಖ್ಯಾತಿ ಗಳಿಸುವ ಹುನ್ನಾರ ಇದು ಎಂದು ಕಿಡಿಕಾರಿದ್ದಾರೆ. ರಾಪರ್ ಹನಿ ಸಿಂಗ್ ಅವರ ಹಾಡಿನಲ್ಲಿ ಮಹಿಳೆಯರನ್ನು ಕೀಳಾಗಿ ಬಿಂಬಿಸಲಾಗಿದೆ ಎಂದು ದೂರಿ ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದನ್ನು ತಿಳಿಸಿದ್ದಾರೆ.