ಜೈಪುರ: ಸಾಮಾನ್ಯವಾಗಿ ಪಕ್ಷದ ಶಾಸಕರಾಗುತ್ತಿದ್ದಂತೆ ತಮ್ಮ ಮಕ್ಕಳೂ ರಾಜಕೀಯ ರಂಗ ಪ್ರವೇಶ ಮಾಡಬೇಕು, ನನ್ನಂತೆ ಶಾಸಕನಾಗಬೇಕೆಂದು ಅಪ್ಪಂದಿರು ಆಲೋಚಿಸುತ್ತಾರೆ ನಿಜ. ಆದರೆ ಇಲ್ಲೊಬ್ಬ ಶಾಸಕ ತಮ್ಮ ಮಗ 8 ತರಗತಿ ಓದಿರುವುದಿಂದ ಅವನ ವಿದ್ಯಾರ್ಹತೆ ಪ್ರಕಾರ ಕೃಷಿ ಉಪಾಜ್ ಮಂಡಿ ಜವಾನ ಹುದ್ದೆಯೇ ಸರಿ ಎಂದು ಅರ್ಜಿ ಸಲ್ಲಿಸಿದ್ದಾರೆ.
ಹೀರಾ ಲಾಲ್ ವರ್ಮಾ ಎಂಬುವವರು ಮಗನ ವಿದ್ಯಾರ್ಹತೆ ಕಂಡು ಜವಾನ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ತಂದೆಯಾಗಿದ್ದು, ಇವರು ಪಶ್ಚಿಮ ರಾಜಸ್ತಾನದ ಟೋಂಕ್ ಜಿಲ್ಲೆಯಲ್ಲಿ ಎರಡು ಬಾರಿ ಶಾಸಕರಾಗಿ ಗೆದ್ದಿದ್ದರು.ರಾಜಸ್ತಾನದ ಅಜ್ಮೇರ್ ಜಿಲ್ಲೆಯಲ್ಲಿ ಕೃಷಿ ಉಪಾಜ್ ಮಂಡಿ (ರಾಜಸ್ಥಾನ ರಾಜ್ಯ ಕೃಷಿ ಮಾರ್ಕೆಟಿಂಗ್ ಬೋರ್ಡ್) ಜವಾನ ಹುದ್ದೆಯ ಸಂದರ್ಶನ ನಡೆಯುವ ಸಂದರ್ಭದಲ್ಲಿ ಬಿಜೆಪಿ ಎಂಎಲ್ಎ ಮಗ ಹಂಸ್ ರಾಜ್ ಹಾಜರಿದ್ದರು. ಎಂಎಲ್ಎ ಮಗನೊಬ್ಬ ಜವಾನ ಹುದ್ದೆ ಸಂದರ್ಶನಕ್ಕೆ ಬಂದಿರುವುದನ್ನು ಕಂಡು ಅಲ್ಲಿ ನೆರೆದಿದ್ದವರಿಗೆ ಆಶ್ಚರ್ಯವಾಗಿತ್ತು.
ಮಗ ಎಷ್ಟು ಹೇಳಿದರೂ ಕೇಳದೆ ಶಿಕ್ಷಣದ ಕಡೆ ಗಮನ ಹರಿಸದೆ 10ನೇ ತೇರ್ಗೆಡೆಯಾಗಲಿಲ್ಲ. ಕೇವಲ 8ನೇ ತರಗತಿಯಷ್ಟೇ ತೇರ್ಗಡೆಯಾಗಿದ್ದಾನೆ. ನನಗೆ ಅವನನ್ನು ರಾಜಕೀಯಕ್ಕೆ ಸೇರಿಸಲು ಇಷ್ಟವಿಲ್ಲ. ಅವನ ಅರ್ಹತೆ, ಸಾಮರ್ಥ್ಯ ಹಾಗೂ ವಿದ್ಯಾರ್ಹತೆಯ ಪ್ರಕಾರ ಅವನಿಗೆ ಜವಾನ ಹುದ್ದೆಯೇ ಸರಿ ಎನ್ನಿಸಿತು.ಅವರ ಸಾಮರ್ಧ್ಯ ಹಾಗೂ ವಿದ್ಯಾರ್ಹತೆಗೂ ಮೀರಿದ ಹುದ್ದೆಗೆ ಪ್ರೋತ್ಸಾಹ ನೀಡುವುದು ನನಗಿಷ್ಟವಿರಲಿಲ್ಲ. ಹಾಗಾಗಿ ಜವಾನ ಹುದ್ದೆಗೆ ಅರ್ಜಿ ಹಾಕಿಸಿದೆ ಎಂದು ಹೀರಾ ಲಾಲ್ ವರ್ಮಾ ಹೇಳಿದ್ದಾರೆ.
ನಾನು ಮೂರು ವಿಷಯಗಳಲ್ಲಿ ಪದವಿ ಪಡೆದಿದ್ದು, ಚಿನ್ನದ ಪದಕ ವಿಜೇತವನ್ನೂ ಪಡೆದಿದ್ದೇನೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಉಪ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ ಸರ್ಕಾರಿ ಕೆಲಸ ಜೀವನದಲ್ಲಿ ಎಷ್ಟು ಮುಖ್ಯ ಎಂಬುದು ನನಗೆ ತಿಳಿದಿದೆ. ನನ್ನ ಮಗ ಶಿಕ್ಷಣವನ್ನು ಮುಂದುವರೆಸಲು ಇಷ್ಟ ಪಡಲಿಲ್ಲ. ಅವನಿಗೆ ಯಾವ ಹುದ್ದೆ ಸರಿಹೊಂದುತ್ತದೆಯೋ ಅಂತಹ ಹುದ್ದೆಯನ್ನೇ ಪಡೆದಿದ್ದಾನೆ. ಇದರಲ್ಲಿ ಅವಮಾನವಾಗುವ ಪ್ರಶ್ನೆಯೇ ಇಲ್ಲ. ನನ್ನ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ. ಶ್ರೀಮಂತ ಜೀವನಕ್ಕಾಗಿ ನನ್ನ ಮಕ್ಕಳು ಸುಳ್ಳು ಹೇಳಿ, ಅಡ್ಡ ದಾರಿ ಹಿಡಿದು, ಕೆಲಸ ತೆಗೆದುಕೊಳ್ಳುವುದು ನನಗೆ ಇಷ್ಠವಿಲ್ಲ. ಯಾವ ಕೆಲಸ, ಯಾವ ಹಂತ ಎಂಬುದಕ್ಕಿಂತ ಪ್ರಮಾಣಿಕವಾದ ಕೆಲಸವಷ್ಟೇ ಇಲ್ಲಿ ಮುಖ್ಯವಾಗುತ್ತದೆ ಎಂದು ತಂದೆಯಾಗಿ ಹಾಗೂ ಒಬ್ಬ ಅಧಿಕಾರಿಯಾಗಿ ತಮ್ಮ ಪ್ರಮಾಣಿಕತೆಯ ಕರ್ತವ್ಯವನ್ನು ಮೆರೆದಿರುವ ಹೀರಾ ಲಾಲ್ ವರ್ಮಾ ಹೇಳಿದ್ದಾರೆ.