ಲಖನೌ: ಮುಸ್ಲಿಂರೆಲ್ಲರೂ ಒಂದಾಗಿ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್ಎಸ್)ವನ್ನು ತುಂಡರಿಸಬೇಕು ಎನ್ನುವ ಮೂಲಕ ಉತ್ತರಪ್ರದೇಶದ ಸಚಿವ ಅಜಂಖಾನ್ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.
ಇದೀಗ ಆರ್‌ಎಸ್ಎಸ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಅಜಂಖಾನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಈ ಕುರಿತಂತೆ ಲಖನೌನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಆರ್ಎಸ್ಎಸ್ ಕೊನೆಗಾಣಿಸುವ ಸಮಯ ಹತ್ತಿರ ಬಂದಿದ್ದು, ಮುಸಲ್ಮಾನರೆಲ್ಲರೂ ಒಂದಾಗಿ ಆರ್ಎಸ್ಎಸ್ ನ್ನು ತುಂಡು ತುಂಡಾಸಬೇಕು ಎಂದು ಹೇಳಿದ್ದಾರೆ.
ಇದೇವೇಳೆ ದೇಶ ವಿಭಜನ ಕುರಿತಂತೆ ಹೇಳಿಕೆ ನೀಡಿರುವ ಅವರು, ಭಾರತ-ಪಾಕಿಸ್ತಾನ ವಿಭಜನೆಯಾಗುವ ಸಂದರ್ಭದಲ್ಲಿ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗುತ್ತಿದ್ದರು. ಆದರೆ ಬಾಪೂಜಿ ಅವರ ಮಾತು ಅವರು ಭಾರತದಲ್ಲಿರುವಂತೆ ಮಾಡಿತ್ತು. ಅಂದು ಮುಸ್ಲಿಮರು ತೆಗೆದುಕೊಂಡ ನಿರ್ಧಾರ ಇಂದು ತಪ್ಪಾಗಿದೆಯೇ ಎಂದು ಮುಸ್ಲಿಮರು ಆಲೋಚಿಸುವಂತಹ ಸಂದರ್ಭ ಎದುರಾಗಿದೆ.
ಇಂದು ಆಡಳಿತ ನಡೆಸುತ್ತಿರುವ ಸರ್ಕಾರದವರು ಹೇಳುವ ಪ್ರಕಾರ ಪಾಕಿಸ್ತಾನಕ್ಕೆ ಹೋದವರು ಅಲ್ಲಿನ ಜನತೆ ಆಗಿ ಬಿಟ್ಟಿದ್ದಾರೆ. ಅವರು ಅಲ್ಲಿಗೆ ಸೇರಿದವರು ಹಾಗಾಗಿ ಪಾಕಿಸ್ತಾನದಲ್ಲಿರುವವರನ್ನು ನಂಬಬೇಡಿ ಎಂದು ಹೇಳುತ್ತಾರೆ. ಮುಸಲ್ಮಾನರಾಗಿ ಭಾರತದಲ್ಲಿರುವುದು ನಮ್ಮ ತಪ್ಪೇ ಎಂದು ಮುಸ್ಲಿಮರು ಇಂದು ಆಲೋಚಿಸುವಂತಹ ಸಂದರ್ಭ ಎದುರಾಗಿದೆ ಎಂದು ಅಜಂ ಖಾನ್ ಹೇಳಿದ್ದಾರೆ.