ದೇಶ

ಭೂ ಹಗರಣ ತನಿಖೆ ರಾಜಕೀಯ ದ್ವೇಷಕ್ಕೆ ಬಳಸಲ್ಲ ಎಂಬ ವಿಶ್ವಾಸವಿದೆ: ರಾಬರ್ಟ್ ವಾದ್ರಾ

Lingaraj Badiger

ನವದೆಹಲಿ: ತಮ್ಮ ವಿರುದ್ಧದ ಭೂ ಅವ್ಯವಹಾರ ಪ್ರಕರಣ ತನಿಖೆಯನ್ನು ಹರಿಯಾಣ ಸರ್ಕಾರ ರಾಜಕೀಯ ದ್ವೇಷಕ್ಕಾಗಿ ಬಳಸಿಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ಶುಕ್ರವಾರ ಹೇಳಿದ್ದಾರೆ.

ಭೂ ಹಗರಣದ ತನಿಖೆಗೆ ಹರಿಯಾಣ ಸರ್ಕಾರ ಉನ್ನತ ಮಟ್ಟದ ಆಯೋಗ ರಚಿಸಿದ ನಂತರ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ವಾದ್ರಾ, ಪ್ರಕರಣದ ಬಗ್ಗೆ ತಾವಾಗಲಿ ತಮ್ಮ ಸಹವರ್ತಿಗಳಾಗಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಕಾನೂನು ಪ್ರಕಾರವೇ ಪಾರದರ್ಶಕವಾದ ತನಿಖೆ ನಡೆಯಲಿ ಎಂದು ಪೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಬುಧವಾರವಷ್ಟೇ ಡಿಎಲ್ ಎಫ್ ಕಂಪನಿಗೆ ಕಾನೂನು ಬಾಹಿರವಾಗಿ ಭೂಮಿ ನೀಡಿರುವ ಬಗ್ಗೆ ತನಿಖೆ ನಡೆಸಲು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತಾರ್ ಅವರು ನಿವೃತ್ತ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದ್ದಾರೆ.

ಹಿಂದೆ ಹರ್ಯಾಣ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ನ ಭೂಪಿಂದರ್ ಸಿಂಗ್ ಹೂಡಾ ಸೋನಿಯಾ ಅಳಿಯಾ ರಾಬರ್ಟ್ ವಾದ್ರಾ ಸೇರಿದಂತೆ ಹಲವು ಬಿಲ್ಡರ್ಸ್ ಗಳಿಗೆ ಭೂಮಿ ನೀಡಿ ಅನುಕೂಲ ಮಾಡಿಕೊಟ್ಟಿದ್ದರು.

2008 ರಲ್ಲಿ ಡಿಎಲ್ ಎಫ್ ಕಂಪನಿಗೆ ಗುರಗಾವ್ ಜಿಲ್ಲೆಯ ಮನೇಸರ್ ನಲ್ಲಿ 58 ಕೋಟಿಗೆ ಮಾರಾಟ ಮಾಡಲಾಗಿತ್ತು. 2013 - 14 ರಲ್ಲಿ ಸಿಎಜಿ ನೀಡಿದ ವರದಿಯಲ್ಲಿ ಎಲ್ಲಿಯೂ ರಾಬರ್ಟ್ ವಾದ್ರ ಹೆಸರನ್ನು ಉಲ್ಲೇಖಿಸಿಲ್ಲ, ವಾದ್ರಾ ಒಡೆತನದ ಸ್ಕೈಲೈಟ್ ಹಾಸ್ಪಿಟಾಲಿಟಿ ವಿರುದ್ಧ ವರದಿ ನೀಡಲಾಗಿತ್ತು.

ಡಿಎಲ್ ಎಫ್ ಕಂಪನಿಗೆ ಕಾನೂನುಬಾಹಿರವಾಗಿ ಭೂಮಿ ನೀಡಲಾಗಿದೆ ಎಂದು ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ತನಿಖೆಗೆ ಆದೇಶಿಸಿದ್ದರು. ಆದರೆ ಹಿಂದಿದ್ದ ಹೂಡಾ ಸರ್ಕಾರ, ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ರಾಬರ್ಟ್ ವಾದ್ರಾಗೆ ಕ್ಲೀನ್ ಚಿಟ್ ನೀಡಿತ್ತು. ಈಗ ಮತ್ತೆ ಬಿಜೆಪಿ ಸರ್ಕಾರ ಹರ್ಯಾಣದಲ್ಲಿ ಅಧಿಕಾರಗದ ಚುಕ್ಕಾಣಿ ಹಿಡಿದಿರುವುದರಿಂದ ಪ್ರಕರಣದ ಸಮಗ್ರ ತನಿಖೆಗೆ ಆಯೋಗ ರಚಿಸಿದೆ.

SCROLL FOR NEXT