ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಒಡೆಯ ಮುಖೇಶ್ ಅಂಬಾನಿ ಬಳಿ ಇರುವ ಹೊಸ ಬುಲೆಟ್ ಪ್ರೂಫ್ ಕಾರು ಖರೀದಿಸಿದ್ದಾರೆ. ಅದರ ಬೆಲೆ ಎಷ್ಟು ಗೊತ್ತಾ? ರು. 8.5 ಕೋಟಿ!
ಈ ಕಾರನ್ನು ರು. 1.6 ಕೋಟಿ ತೆತ್ತು ಮುಂಬೈ ಆರ್‌ಟಿಒ ದಲ್ಲಿ ನೋಂದಣಿ ಮಾಡಲಾಗಿದೆ. ಮುಂಬೈ ಆರ್‌ಟಿಒದಲ್ಲಿ ಸಿಕ್ಕ ಅತೀ ಹೆಚ್ಚು ನೋಂದಣಿ ಹಣ ಇದಾಗಿದೆ.
ತಾರ್‌ದೇವ್ ಆರ್‌ಟಿಒ ದಲ್ಲಿ ಮುಖೇಶ್ ಅಂಬಾನಿ ಬಿಎಂಡಬ್ಲ್ಯು7 ಸೀರಿಸ್ ಕಾರು ನೋಂದಣಿ ಮಾಡಿದ್ದಾರೆ. ಅತೀ ಹೆಚ್ಚು ಭದ್ರತಾ ವ್ಯವಸ್ಥೆಗಳಿರುವ ಈ ಕಾರಿನ ಬೆಲೆ ರು. 8.5 ಕೋಟಿ ಆಗಿದ್ದರೂ, ಅದರ ಶೇ. 20ರಷ್ಟು ವಾಹನ ನೋಂದಣಿಗೆ ಖರ್ಚು ಮಾಡಬೇಕಾಗುತ್ತದೆ ಎಂದು ಆರ್ ಟಿಒ ಅಧಿಕಾರಿಗಳು ಹೇಳಿದ್ದಾರೆ.
ಜರ್ಮನಿಯಲ್ಲಿ ವಿಶೇಷವಾಗಿ ನಿರ್ಮಿಸಿರುವ ಕಾರು, ಬುಲೆಟ್‌ಪ್ರೂಫ್ ಆಗಿರುವ ಕಾರಣವೇ ದುಬಾರಿ ಆಗಿದ್ದು. ಕಾರು ವಿದೇಶದಿಂದ ಆಮದು ಮಾಡುವಾಗ ಶೇ. 300 ತೆರಿಗೆ ಪಾವತಿಸಬೇಕಾಗಿ ಬರುತ್ತದೆ. ಭಾರತದಲ್ಲಿ ನರೇಂದ್ರ ಮೋದಿ ಸೇರಿದಂತೆ ಬೆರಳೆಣಿಕೆ ಮಂದಿಯಷ್ಟೇ ಈ ಕಾರನ್ನು ಬಳಸುತ್ತಿದ್ದಾರೆ.
ಅಂಬಾನಿ ಮತ್ತು ಕುಟುಂಬದ ಸುರಕ್ಷೆಯನ್ನು ಮನಗಂಡು ಈ ಕಾರನ್ನು ಖರೀದಿಸಲು ತೀರ್ಮಾನಿಸಲಾಗಿದೆ ಎಂದು ರಿಲಯನ್ಸ್ ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ. ಆದಾಗ್ಯೂ, ರಿಲಯನ್ಸ್ ಇಂಡಸ್ಟ್ರೀಸ್ ಹೆಸರಿನಲ್ಲಿ ಕಾರು ನೋಂದಣಿ ಮಾಡಲಾಗಿದೆ.