ಮುಂಬೈ: ಮುಸ್ಲಿಂ ಎಂಬ ಕಾರಣ ನೀಡಿ ಕೆಲಸದ ಅರ್ಜಿಯನ್ನು ತಿರಸ್ಕರಿಸಿದ ಮುಂಬೈ ಮೂಲದ ವಜ್ರಾಭರಣ ರಫ್ತುಸಂಸ್ಥೆಯ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮುಂಬೈ ಮೂಲದ ಬ್ಯುಸಿನೆಸ್ ಮ್ಯಾನೇಜ್‌ಮೆಂಜ್ ಪದವೀಧರನಾದ ಜೆಶಾನ್ ಅಲಿ ಖಾನ್ ಎಂಬಾತ ವಜ್ರಾಭರಣ ರಫ್ತು ಕಂಪನಿಯಾದ ಹರಿಕೃಷ್ಣ ಎಕ್ಸ್ ಪೋರ್ಟ್ ಪ್ರೈ. ಲಿಮಿಟೆಡ್ ನಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಹರಿಕೃಷ್ಣ ಎಕ್ಸ್‌ಪೋರ್ಟ್ ನಾವು ಮುಸ್ಲೀಮೇತರ ಅಭ್ಯರ್ಥಿಗಳಿಗಷ್ಟೇ ಅವಕಾಶ ನೀಡುತ್ತೇವೆ ಎಂದು ಉತ್ತರಿಸಿತ್ತು.
ಧರ್ಮದ ಹೆಸರಲ್ಲಿ ತಾರತಮ್ಯ ತೋರಿರುವ ಸಂಸ್ಥೆ ತಮಗೆ ಕಳಿಸಿರುವ ಇಮೇಲ್‌ನ ಪ್ರತಿಯನ್ನು ಜೆಶಾನ್ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಜೆಶಾನ್ ದೂರು ಸ್ವೀಕರಿಸಿದ ಪೊಲೀಸರು ಹರಿಕೃಷ್ಣ ಎಕ್ಸ್‌ಪೋರ್ಟ್ ಪ್ರೈ. ಲಿಮಿಟೆಡ್ ಸಂಸ್ಥೆ ವಿರುದ್ಧ ಕೇಸು ದಾಖಲಿಸಿದ್ದಾರೆ.
ನಿಯಮ ಪ್ರಕಾರ, ಇಂಥಾ ಕೇಸುಗಳಿಗೆ 3 ವಷ ಸಜೆ ವಿಧಿಸಲಾಗುವುದು. ತನಿಖೆ ನಡೆಸಿದ ನಂತರ ಇದಕ್ಕೆ ಕಾರಣಕರ್ತರು ಯಾರು ಎಂಬುದು ಗೊತ್ತಾಗಲಿದೆ ಎಂದು ಪೊಲೀಸ್ ಅಧಿಕಾರಿ ಸೂರ್ಯಕಾಂತ್ ಜಗ್‌ದಲೆ ಹೇಳಿದ್ದಾರೆ.
ಹರಿಕೃಷ್ಣ ಎಕ್ಸ್‌ಪೋರ್ಟ್ ಕಳಿಸಿದ ಇಮೇಲ್ ವಿವಾದಕ್ಕೀಡಾಗುತ್ತಿದ್ದಂತೆ, ಪ್ರಸ್ತುತ ಸಂಸ್ಥೆ ನಮ್ಮ ಸಿಬ್ಬಂದಿಯೊಬ್ಬರು ಅಚಾತುರ್ಯದಿಂದ ಮೇಲ್ ಕಳಿಸಿದ್ದಾರೆ. ನಾವೆಂದಿಗೂ ಧರ್ಮದ ಹೆಸರಲ್ಲಿ ತಾರತಮ್ಯ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದೆ.