ನವದೆಹಲಿ: ಅಧಿಕಾರಿಗಳ ನೇಮಕ ವಿಷಯದಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅಧಿಕಾರವನ್ನು ಎತ್ತಿಹಿಡಿದಿರುವ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಸಿ.ಎಂ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ಕ್ರಮವನ್ನು ಸಮರ್ಥಿಸಿಕೊಳ್ಳುವ ಮೂಲಕ ದೆಹಲಿ ಜನತೆಯ ಬೆನ್ನಿಗೆ ಚೂರಿ ಹಾಕಿದೆ ಎಂದು ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ದೆಹಲಿ ಚುನಾವಣೆಯಲ್ಲಿ ಸೋಲು ಕಂಡಿತ್ತು, ಈಗ ಆಮ್ ಆದ್ಮಿ ಸರ್ಕಾರ ಭ್ರಷ್ಟಾಚಾರವನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳಿಂದ ಹೆದರಿರುವ ಬಿಜೆಪಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಗೆ ಬೆಂಬಲಿಸುವ ಮೂಲಕ ಮತ್ತೊಮ್ಮೆ ಸೋಲು ಕಂಡಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಅಧಿಕಾರಿ ನೇಮಕ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವೆ ವಿವಾದ ಉಂಟಾಗಿದ್ದ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ್ದ ಕೇಂದ್ರ ಗೃಹ ಇಲಾಖೆ, ದೆಹಲಿ ಲೆಫ್ಟಿನೆಂಟ್ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ವಿಶೇಷ ಅಧಿಸೂಚನೆ ಹೊರಡಿಸಿತ್ತು. ಉನ್ನತ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಮಾಡುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್‌ಗೆ ಇದೆ ಎಂದು ಅಧಿಸೂಚನೆ ಮೂಲಕ ಸ್ಪಷ್ಟಪಡಿಸಿತ್ತು.
ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಗವರ್ನರ್ ಮುಖ್ಯಮಂತ್ರಿಗಳ ಅಭಿಪ್ರಾಯ ಪಡೆಯುವುದು ಕಡ್ಡಾಯವಲ್ಲ ಎಂದು ಹೇಳಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕೇಜ್ರಿವಾಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಕೂಡಾ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಆಮ್ ಆದ್ಮಿ ಸರ್ಕಾರದ ಬಗ್ಗೆ ಕೇಂದ್ರ ಸರ್ಕಾರ ಹೆದರಿದೆ ಎಂಬುದು ಈ ಆದೇಶದಿಂದ ಸ್ಪಷ್ಟವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.