ನವದೆಹಲಿ: ವರ್ಷಾಚರಣೆ ಸಂಭ್ರಮದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ಕಾಂಗ್ರೆಸ್ ಮತ್ತಷ್ಟು ತೀವ್ರಗೊಳಿಸಿದೆ.
ಪ್ರಮುಖ ವಿಚಾರಗಳಿಗೆ ಸಂಬಂಧಿಸಿ ಎನ್‍ಡಿಎ ಸರ್ಕಾರದಲ್ಲಿ ಮೋದಿ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ನೀತಿ-ನಿರ್ಧಾರಗಳ ವಿಚಾರದಲ್ಲಿ ಕೇಂದ್ರೀಕೃತ ವ್ಯವಸ್ಥೆಯಿಂದಾಗಿ ದೇಶದಲ್ಲಿ 'ನೀತಿ ಗ್ರಹಣ' ಉಂಟಾಗಿದೆ. ಖಾಲಿ ಬಿದ್ದಿರುವ ಮಹತ್ವದ ಹುದ್ದೆಗಳ ನೇಮಕ ಕಾರ್ಯ ಸ್ಥಗಿತಗೊಂಡಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಆರೋಪಿಸಿದ್ದಾರೆ.
ಲೋಕಪಾಲ, ಸಿವಿಸಿ, ಸಿಐಸಿ ಮತ್ತು ಡಿಆರ್‌ಡಿಒ ಸೇರಿದಂತೆ ಅನೇಕ ವೈಜ್ಞಾನಿಕ ಸಂಸ್ಥೆಗಳ ಮುಖ್ಯಸ್ಥರ ಹುದ್ದೆ ಹಲವು ಸಮಯದಿಂದ ಖಾಲಿ ಉಳಿದಿದೆ. ಒಂದು ವೇಳೆ ಸರ್ಕಾರವೇ ನಿರ್ಣಾಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಾದಲ್ಲಿ ಈ ಹುದ್ದೆಗಳು ಇಷ್ಟು ದಿನ ಭರ್ತಿಯಾಗದಿರಲು ಕಾರಣವೇನು? ಈ ವಿಳಂಬಕ್ಕೆ ಕೇಂದ್ರೀಕೃತ ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥೆಯೇ ಕಾರಣ. ಇದರ ಪರಿಣಾಮ 'ನೀತಿ ಗ್ರಹಣ' ಹಿಡಿದಿದೆ. ನೇಮಕ ಪ್ರಕ್ರಿಯೆಗಳು ನೆನೆಗುದಿಗೆ ಬಿದ್ದಿವೆ ಎಂದು ಶರ್ಮಾ ಆರೋಪಿಸಿದ್ದಾರೆ.
ರಫೇಲ್ ಡೀಲ್‍ಗೂ ವಿರೋಧ: ಫ್ರಾನ್ಸ್ ಸರ್ಕಾರದ ಜತೆಗಿನ ರಫೇಲ್ ಯುದ್ಧ ವಿಮಾನ ಖರೀದಿ ಡೀಲ್‍ಗೆ ಸಂಬಂಧಿಸಿಯೂ ಶರ್ಮಾ ಕಿಡಿಕಾರಿದ್ದಾರೆ. ಈ ಡೀಲ್ ನಿಂದ ಎಚ್‍ಎಎಲ್ ಅನ್ನು ಹೊರಗಿಟ್ಟದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.