ನವದೆಹಲಿ: ಕಪ್ಪು ಹಣ ತಡೆಯಲು ಯುಪಿಎ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ ಎಂದು ಪ್ರಶ್ನಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಪ್ಪು ಹಣ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದೆ ಎಂದು ಮಂಗಳವಾರ ಹೇಳಿದ್ದಾರೆ.
ಎನ್‌ಡಿಎ ಸರ್ಕಾರಕ್ಕೆ ಒಂದು ವರ್ಷದ ತುಂಬಿದ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಾ, ಕಾಂಗ್ರೆಸ್‌ಗೆ ಕಪ್ಪು ಹಣದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಕಪ್ಪು ಹಣ ವಾಪಸ್ ತರಲು ಯುಪಿಎ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು. ಅಲ್ಲದೆ ಈ ಹಿಂದಿನ ಯುಪಿಎ ಸರ್ಕಾರ ಕಪ್ಪು ಹಣ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಕಪ್ಪು ಹಣ ತನಿಖೆಗೆ ಆಯೋಗ ರಚಿಸಿದ್ದು ಮೋದಿ ಸರ್ಕಾರ, ಮೊದಲ ಸಚಿವ ಸಂಪುಟ ಸಭೆಯಲ್ಲೇ ಆಯೋಗ ರಚಿಸಲಾಯಿತು. ಅಲ್ಲದೆ ಕಪ್ಪು ಹಣ ತಡೆಗೆ ಕಾಯ್ದೆಯನ್ನೂ ಜಾರಿ ಮಾಡಲಾಗಿದೆ. ಪಾರದರ್ಶಕ ರೀತಿಯಲ್ಲಿ ಗಣಿಗಳ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಬಡತನ ನಿರ್ಮೂಲನೆಯ ಕಾರ್ಯಕ್ರಗಳನ್ನು ಜಾರಿಗೊಳಿಸಲಾಗಿದೆ ಎಂದು ಶಾ ತಿಳಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದನಂತರ ಹಣದುಬ್ಪರ, ಭ್ರಷ್ಟಾಚಾರ ಕಡಿಮೆಯಾಗಿದೆ. ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಕಳೆದ ಒಂದು ವರ್ಷದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಅಮಿತ್ ಶಾ ಹೇಳಿದರು.