ಭುವನೇಶ್ವರ್: ಒಡಿಶಾದ ಮಾಜಿ ಮುಖ್ಯಮಂತ್ರಿ ಗಿರಿಧರ್ ಗಮಾಂಗ್ ಅವರು ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿರುವುದಾಗಿ ತಿಳಿದುಬಂದಿದೆ.
ಪಕ್ಷದಲ್ಲಿ ಸಾಕಷ್ಟುಅವಮಾನವಾಗಿದ್ದು, ನನಗೆ ಬೆಲೆಯೇ ಸಿಗುತ್ತಿಲ್ಲ. ಹಾಗಾಗಿ ತೀವ್ರ ಬೇಸರವಾಗಿದೆ ಎಂದು ಹೇಳಿರುವ ಗಿರಿಧರ್ ಗಮಾಂಗ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಗಮಾಂಗ್ ಸಲ್ಲಿಸಿರುವ ರಾಜಿನಾಮೆ ಪತ್ರದಲ್ಲಿ, 1999ರಲ್ಲಿ ವಾಜಪೇಯಿ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದು. ಅಂದು ನಾನು ಚಲಾಯಿಸಿದ ಒಂದೇ ಒಂದು ಮತ ವಾಜಪೇಯಿ ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ಆದರೆ, ಇಂದು ನನ್ನ ಬಗ್ಗೆ ಸಾರ್ವಜನಿಕರು ಹಲವು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದು, ಪಕ್ಷವಾಗಲೀ ಅಥವಾ ಪಕ್ಷ ಸದಸ್ಯರಾಗಲಿ ಯಾರೊಬ್ಬರೂ ನನ್ನ ಬೆಂಬಲಕ್ಕೆ ನಿಂತಿಲ್ಲ. ಇಷ್ಟೆಲ್ಲಾ ಅವಮಾನ, ಅಪಮಾನಗಳಾದರೂ ನಾನು ಬೇರೆ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಎಂದಿಗೂ ಆಲೋಚನೆ ನಡೆಸಿಲ್ಲ.
ಕಳೆದ 43 ವರ್ಷಗಳಿಂದ ಪಕ್ಷದಲ್ಲಿ ಸಂಸದ, ಕೇಂದ್ರ ಸಚಿವ ಹಾಗೂ ಮುಖ್ಯಮಂತ್ರಿಯಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಆದರೆ, ಪಕ್ಷದ ಸಿದ್ಧಾಂತ ಅಥವಾ ಪಕ್ಷದ ನಾಯಕರ ವಿರುದ್ಧ ಎಂದಿಗೂ ಹೇಳಿಕೆಗಳನ್ನು ನೀಡಿಲ್ಲ. ಪಕ್ಷ ನನ್ನನ್ನು ನಡೆಸಿಕೊಂಡ ರೀತಿ ಬಹಳ ನೋವುಂಟು ಮಾಡಿದೆ. ಬಹಳ ನೋವಿನಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಗಿರಿಧರ್ ಸಲ್ಲಿಸಿದ್ದ ರಾಜಿನಾಮೆ ಪತ್ರದಲ್ಲಿ ಹೇಳಿದ್ದಾರೆ.
ಗಿರಿಧರ್ ಗಮಾಂಗ್ 1972 ರಿಂದ 2004 ರವರೆಗೆ ಲೋಕಸಭೆಯಲ್ಲಿ ಸದಸ್ಯರಾಗಿದ್ದರು, 1999 ರವರೆಗೆ ಒಡಿಶಾ ಮುಖ್ಯಮಂತ್ರಿಯಾಗಿದ್ದ ಇವರು, 9 ಬಾರಿ ಕೊರಪುತ್ ಕ್ಷೇತ್ರದ ಸಂಸದರಾಗಿದ್ದರು. ಅಲ್ಲದೆ, ನಾಲ್ಕು ಬಾರಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.