ದೇಶ

ಸೆಲ್ಫಿ ತಂದ ಸಾವು

Srinivas Rao BV

ಮುಂಬೈ: ಸೆಲ್ಫಿಯಿಂದ ಜೀವಕ್ಕೆ ಅಪಾಯ ಉಂಟಾದ ಅನೇಕ ಘಟನೆಗಳು ನಡೆದಿವೆ.  ಮುಂಬೈ ನಲ್ಲಿ ಇಂಥಹದ್ದೇ ಘಟನೆಯೊಂದು ನಡೆದಿದ್ದು ಸೆಲ್ಫಿ ಕ್ಲಿಕ್ಕಿಸಲು ರೈಲಿನ ಮೇಲೆ ಹತ್ತಿದ್ದ 14 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಮುಂಬೈ ನ ನಹೂರ್ ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್(ಸರಕು ಸಾಗಣೆ) ರೈಲಿನ ಮೇಲೆ ಹತ್ತಿದ ಸಾಹಿಲ್ ಸಿ ಇಕ್ಷ್ವಾಕರ್ ಎಂಬ ಬಾಲಕ ಸೆಲ್ಫಿ ಕ್ಲಿಕ್ಕಿಸಲು ಯತ್ನಿಸಿದ್ದಾನೆ. ಈ ವೇಳೆ 25 ,000 ವೋಲ್ಟ್ಸ್ ಪ್ರಮಾಣದ ವಿದ್ಯುತ್ ತಂತಿಗೆ ಸಿಲುಕಿ ಅಪಘಾತಕ್ಕೀಡಾಗಿ ಕೆಲವೇ ನಿಮಿಷದಲ್ಲಿ ಬಾಲಕ ಸಾವನ್ನಪ್ಪಿದ್ದಾನೆ.
ಬಾಲಕನ ದೇಹದಲ್ಲಿ ಶೇ.80 ರಷ್ಟು ಸುಟ್ಟ ಗಾಯಗಳಿದ್ದವು ಎಂದು ವೈದ್ಯರು ತಿಳಿಸಿದ್ದಾರೆ. ಅಪಘಾತ ನಡೆದ ಬೆನ್ನಲ್ಲೇ ಬಾಲಕನನ್ನು ರಾಜಾವಾಡಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಆತ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. 
ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಬಾಲಕ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ಸ್ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ. ಸ್ನೇಹಿತರೊಂದಿಗೆ ರೈಲು ನಿಲ್ದಾಣದಲ್ಲಿದ್ದ ಇಕ್ಷ್ವಾಕರ್, ತನ್ನ ತಂದೆ ಎರಡು ದಿನದ ಹಿಂದೆ ಉಡುಗೊರೆ ನೀಡಿದ್ದ ಮೊಬೈಲ್ ಫೋನ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಲು ರೈಲಿನ ಮೇಲೇರಿದ್ದ ಎಂದು ತಿಳಿದುಬಂದಿದೆ.  
ಸೆಲ್ಫಿ ಕ್ಲಿಕ್ಕಿಸಲು ತೆರಳಿ ಸಾವಿಗೀಡಾಗುತ್ತಿರುವ ಈ ವರ್ಷದ ಎರಡನೇ ಘಟನೆ ಇದಾಗಿದೆ. ಈ  ಹಿಂದೆ ಗಣೇಶ್ ಎಂಬ ಕಾಲೇಜು ವಿದ್ಯಾರ್ಥಿ ಇದೇ ರೀತಿ ರೈಲಿನ ಮೇಲೆ ಹತ್ತಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ವಿದ್ಯುತ್ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ.

SCROLL FOR NEXT