ಸಾಂದರ್ಭಿಕ ಚಿತ್ರ 
ದೇಶ

ಮತ್ತೊಂದು ದಾದ್ರಿ: ಮದ್ರಸಾ ಮುಖ್ಯ ಶಿಕ್ಷಕನ ಕೊಂದ ಗುಂಪು

ದಾದ್ರಿ ಘಟನೆಯು ದೇಶಾದ್ಯಂತ ವಿವಾದವೆಬ್ಬಿಸಿರುವ ನಡುವೆಯೇ ಇಂಫಾಲ್‍ನಲ್ಲಿ ಕರು ಕದ್ದಿದ್ದಾರೆಂಬ ಆರೋಪದಲ್ಲಿ...

ನವದೆಹಲಿ: ದಾದ್ರಿ ಘಟನೆಯು ದೇಶಾದ್ಯಂತ ವಿವಾದವೆಬ್ಬಿಸಿರುವ ನಡುವೆಯೇ ಇಂಫಾಲ್‍ನಲ್ಲಿ ಕರು ಕದ್ದಿದ್ದಾರೆಂಬ ಆರೋಪದಲ್ಲಿ ಮದರಸಾದ ಹೆಡ್‍ಮಾಸ್ಟರ್‍ವೊಬ್ಬರನ್ನು ಹತ್ಯೆಗೈದ ಆಘಾತಕಾರಿ ಘಟನೆ ವರದಿಯಾಗಿದೆ. 

ಮದರಸಾದ ಮುಖ್ಯಶಿಕ್ಷಕ ಮೊಹಮ್ಮದ್ ಹಸ್ಮದ್ ಅಲಿ(55) ಅವರ ಮೃತದೇಹವು ಕೈರಾವೋ ಮಕೇಟಿಂಗ್ ಗ್ರಾಮದಲ್ಲಿ ಸೋಮವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಘಟನೆ?: ಗ್ರಾಮದ ಶೆಡ್‍ವೊಂದರಲ್ಲಿ 2 ದಿನಗಳ ಹಿಂದೆ ಕರುವೊಂದು ಕಾಣೆಯಾಗಿತ್ತು. ಇದರ ಬೆನ್ನಲ್ಲೇ ಹಸ್ಮದ್ ಅಲಿ ಅವರು ಕರುವೊಂದನ್ನು ಹಿಡಿದುಕೊಂಡು ಸಾಗುತ್ತಿರುವುದನ್ನು ನೋಡಿದ ಗುಂಪೊಂದು, ಅಲಿ ಅವರ ಮೇಲೆ ಗಂಭೀರ ಹಲ್ಲೆ ನಡೆಸಿ ಕೊಂದು ಹಾಕಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಅಲಿ ಅವರ ಮೃತದೇಹವು ಅವರ ಮನೆಯಿಂದ 5 ಕಿ.ಮೀ. ದೂರದಲ್ಲಿ ಪತ್ತೆಯಾಗಿದ್ದು, ಈ ಘಟನೆಯು ಮಣಿಪುರದ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ಕೈರಾವೋ ಉದ್ವಿಗ್ನ: ಘಟನೆಯು ಬೆಳಕಿಗೆ ಬರುತ್ತಿದ್ದಂತೆ, ಕೈರಾವೋ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದು, ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. 

ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವವರೆಗೂ ಮೃತ ಅಲಿ ಅವರ ಅಂತ್ಯಸಂಸ್ಕಾರ ಮಾಡುವುದಿಲ್ಲ ಮುಸ್ಲಿಂ ಸಂಘಟನೆಯೊಂದು ಪಟ್ಟು ಹಿಡಿದು ಕುಳಿತಿದೆ. ಅಲ್ಲದೆ, ಗುರುವಾರ ರಾಜ್ಯವ್ಯಾಪಿ ಬಂದ್‍ಗೂ ಕರೆ ನೀಡಿದೆ. `ಅಲಿ ಅವರು ತುಂಬಾ ಮೃದು ಸ್ವಭಾವದ, ಪ್ರಾಮಾಣಿಕ ಶಿಕ್ಷಕರು. ಅವರನ್ನು ಮಾಡದ ತಪ್ಪಿಗಾಗಿ ಕೊಲ್ಲಲಾಗಿದೆ. 

ಕೃತ್ಯ ಎಸಗಿದವರು ಯಾರೆಂದು ಪೊಲೀಸರಿಗೆ ಗೊತ್ತಿದೆ. ಆದರೂ ಕ್ರಮ ಕೈಗೊಳ್ಳುತ್ತಿಲ್ಲ. ನ್ಯಾಯ ಸಿಗುವವರೆಗೂ ನಾವು ಅಂತ್ಯಸಂಸ್ಕಾರ ಮಾಡುವುದಿಲ್ಲ' ಎಂದು ಅಲಿ ಕೊಲೆಗೆ ಸಂಬಂಧಿಸಿದ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಮೊಹಮ್ಮದ್ ರಜಾವುದ್ದೀನ್ ತಿಳಿಸಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. 

ಟ್ವೀಟ್ ವಾಪಸ್ ತೆಗೆದುಕೊಂಡ ಬಿಜೆಪಿ ನಾಯಕ `ಶಾರುಖ್ ಖಾನ್‍ರ ದೇಹ ಮಾತ್ರ ಭಾರತದಲ್ಲಿದೆ, ಮನಸ್ಸು ಪಾಕಿಸ್ತಾನದಲ್ಲಿದೆ' ಎಂಬ ತಮ್ಮ ಟ್ವೀಟ್ ವಿವಾದ ಸೃಷ್ಟಿಸುತ್ತಿದ್ದಂತೆ ಎಚ್ಚೆತ್ತ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ, ಟ್ವೀಟ್ ಅನ್ನು ವಾಪಸ್ ತೆಗೆದುಕೊಂಡಿದ್ದಾರೆ. `ಯಾರಿಗೂ ನೋವುಂಟುಮಾಡುವ ಉದ್ದೇಶ ನನ್ನದಲ್ಲ' ಎಂದೂ ಹೇಳಿದ್ದಾರೆ. 

ಅಷ್ಟೇ ಅಲ್ಲ, `ಭಾರತದಲ್ಲಿ ಅಸಹಿಷ್ಣುತೆ ಇದ್ದಿದ್ದರೆ, ಶಾರುಖ್ ಅವರು ಅಮಿತಾಭ್‍ರ ನಂತರದ ಅತಿದೊಡ್ಡ ಸ್ಟಾರ್ ಆಗುತ್ತಿರಲಿಲ್ಲ' ಎಂದೂ ಅವರು ಟ್ವೀಟ್ ಮಾಡಿದ್ದಾರೆ. ಇದೇ ವೇಳೆ, ವಿಜಯವರ್ಗೀಯ ಅವರ ಟ್ವೀಟ್ ವಿವಾದದಿಂದ ದೂರ ಉಳಿದಿರುವ ಬಿಜೆಪಿ, ಅದು ಪಕ್ಷದ ಅಭಿಪ್ರಾಯವಲ್ಲ ಎಂದಿದೆ. 

ಹೋಲಿಸಿದ್ದು ಸರಿಯಲ್ಲವೆಂದ ಸಂಘ: ಆರೆಸ್ಸೆಸ್ ಅನ್ನು ಐಎಸ್ ಉಗ್ರ ಸಂಘಟನೆಗೆ ಹೋಲಿಸಿದ್ದಕ್ಕೆ ಆರೆಸ್ಸೆಸ್‍ನ ತೆಲಂಗಾಣ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತವು ಎಲ್ಲ ರೀತಿಯ ಪ್ರತ್ಯೇಕತಾವಾಗಿ ಸಿದ್ಧಾಂತವನ್ನು ವಿರೋಧಿಸುತ್ತದೆ. ಒಂದು ವೇಳೆ ಆರೆಸ್ಸೆಸ್, ಐಎಸ್‍ನಂತಹ ಮನಸ್ಥಿತಿ ಹೊಂದಿದ್ದರೆ ಈ ಪ್ರಜಾಸತ್ತಾತ್ಮಕ ದೇಶದಲ್ಲಿ ಇಷ್ಟು ವರ್ಷ ಉಳಿಯುತ್ತಲೇ ಇರಲಿಲ್ಲ. 

ಭಾರತದಲ್ಲಿ ಇಂತಹ ಸಿದ್ಧಾಂತ ಯಾವತ್ತೂ ಉಳಿಯುವುದೂ ಇಲ್ಲ. ಆರೆಸ್ಸೆಸ್ ವಸುದೈವ ಕುಟುಂಬಕಂ ಎಂಬ ನೀತಿಯನ್ನು ಅನುಸರಿಸುತ್ತಿದೆ. ಅದನ್ನು ಐಎಸ್‍ಗೆ ಹೋಲಿಸುವುದು ಸರಿಯಲ್ಲ ಎಂದೂ ಹೇಳಿದ್ದಾರೆ ಚಂದ್ರಶೇಖರ್. 

ದೆಹಲಿ ಪೊಲೀಸರಿಗೆ ಬಿಸಿ: ಕೇರಳ ಹೌಸ್ ಬೀಫ್ ವಿವಾದಕ್ಕೆ ಸಂಬಂಧಿಸಿ ದೆಹಲಿ ಪೊಲೀಸರಿಗೆ ತೀವ್ರ ಹಿನ್ನಡೆಯಾಗಿದೆ. ಕೇರಳ ಭವನಕ್ಕೆ ದಾಳಿ ನಡೆಸುವಾಗ ಪೊಲೀಸರು ಸೂಕ್ತ ನಿಬಂಧನೆಗಳನ್ನು ಪಾಲಿಸಿಲ್ಲ ಎಂದು ನಗರದ ಪಶುಸಂಗೋಪನೆ ಇಲಾಖೆ ನೀಡಿದ ವರದಿ ತಿಳಿಸಿದೆ. 

ಬುಧವಾರ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‍ರಿಗೆ ವರದಿ ಸಲ್ಲಿಸಿದ ಇಲಾಖೆಯು, `ದೆಹಲಿ ಪೊಲೀಸರು ಕೇರಳ ಭವನಕ್ಕೆ ಭದ್ರತೆ ನೀಡಲೆಂದು ಹೋಗುವ ಬದಲು, ಅಲ್ಲಿ ಬೀಫ್ ಇದೆಯೇ ಎಂದು ಪರಿಶೀಲಿಸಲು ತೆರಳಿದ್ದರು. 

ಒಂದು ಬಾರಿ ಅಡುಗೆ ಮನೆಯಲ್ಲಿ ಬೀಫ್ ಬಗ್ಗೆ ಪರಿಶೀಲಿಸಿ ಇಲ್ಲವೆಂದು ಖಾತ್ರಿಯಾದ ಬಳಿಕ ವಾಪಸ್ ಹೋದರು. 15-20 ನಿಮಿಷ ಬಿಟ್ಟು ಮತ್ತೆ ಬಂದು ಪರಿಶೀಲನೆ ನಡೆಸಿದರು. ಈ ಮೂಲಕ ಪೊಲೀಸರು ಎಲ್ಲ ನಿಬಂಧನೆಗಳನ್ನು ಗಾಳಿಗೆ ತೂರಿದರು' ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT