ನವದೆಹಲಿ: 1347 ಕಿರಿಯ ಸಹಾಯಕ ಎಂಜಿನಿಯರ್ ಗಳ ನೇಮಕವನ್ನು ರದ್ದು ಮಾಡಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್, ನಿಯಮಾನುಸಾರ ಮರು ನೇಮಕ ಮಾಡುವಂತೆ ತೀರ್ಪು ನೀಡಿದೆ. ಆದರೆ ವಯೋಮಿತಿ ಮೀರಿರುವ ಎಂಜಿನಿಯರ್ ಗಳು ಸೇವೆಯಲ್ಲಿ ಮುಂದುವರಿಯಬಹುದು ಎಂದೂ ಹೇಳಿದೆ.
ಕರ್ನಾಟಕ ಸರ್ಕಾರ 2003-04ರಲ್ಲಿ 1347 ಎಂಜಿನಿಯರ್‍ಗಳನ್ನು ನೇಮಕ ಮಾಡುವಾಗ ಪಾರದರ್ಶಕ ನಿಯಮ ಪಾಲಿಸಿಲ್ಲ ಎಂಬ ಕಾರಣಕ್ಕೆ ಆಯ್ಕೆ ರದ್ದು ಮಾಡಿತ್ತು. ವಯೋಮಿತಿ ಮೀರಿರುವ ಎಂಜಿನಿಯರ್‍ಗಳಿಗೆ ಕೊಂಚ ಕರುಣೆ ತೋರಿರುವ ಕೋರ್ಟ್, ಅವರ ಸೇವಾವಧಿ ಮುಗಿಯುವ ವರೆಗೂ ಇವರಿಗೆ ಯಾವುದೇ ಬಡ್ತಿ ಮತ್ತಿತರ ಸೌಲಭ್ಯಗಳಿಲ್ಲ ಎಂದು ತಿಳಿಸಿದೆ.
ಹುದ್ದೆ ಕಳೆದುಕೊಳ್ಳುವವರು ಹೊಸ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ನೂತನ ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಹರಾದವರಿಗೆ ನಿಯಮಾನುಸಾರ 2003ರಿಂದಲೇ ಸೇವಾ ಹಿರಿತನ ನೀಡಬೇಕು ಎಂದು ನ್ಯಾ.ಜೆ.ಎಸ್. ಖೇಹರ್ ನೇತೃತ್ವದ ಪೀಠ ಸೂಚಿಸಿದೆ. ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬಿ.ಎನ್. ಪ್ರಭು ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.
ಆಯ್ಕೆ ಪ್ರಕ್ರಿಯೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಸಬೇಕು. ಮೆರಿಟ್ ಆಧಾರದ ಮೇಲೆ (ಬಿಇ, ಡಿಪ್ಲೊಮಾದಲ್ಲಿ ಗಳಿಸಿದ ಅಂಕ) ಹೊಸ ಪಟ್ಟಿ ತಯಾರಿಸಬೇಕು. ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ನಡೆಸದೇ, ಮೆರಿಟ್ ಆಧಾರದ ಮೇಲೆಯೇ ಆಯ್ಕೆ ಪೂರ್ಣಗೊಳಿಸಬೇಕು ಎಂದು ಆದೇಶಿಸಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಹೊಸಬರಿಗೂ ಅವಕಾಶ ನೀಡಬಹುದು. ಮೆರಿಟ್ ಆಧಾರದ ಮೇಲೆ ಅರ್ಹರಾದರೆ ಹೊಸಬರನ್ನು ನೇಮಕ ಮಾಡಿಕೊಳ್ಳಬೇಕು. ಒಂದು ವೇಳೆ, ಹಾಲಿ ಇರುವವರು ಮೆರಿಟ್ ಆಧಾರದ ಮೇಲೆ ಆಯ್ಕೆಯಾಗದಿದ್ದರೆ ವಯೋಮಿತಿ ಮೀರಿದ್ದರೆ, ಅಂತಹವರನ್ನು ಮಾನವೀಯತೆಯಡಿ ಸೂಪರ್ ನ್ಯೂಮರಿಕಲ್ ನಿಯಮದಡಿ ಸೇವೆಯಲ್ಲಿ ಮುಂದುವರೆಸಬೇಕು. ಅಂತಹವರಿಗೆ ಯಾವುದೇ ಬಡ್ತಿ ನೀಡುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ರಾಜ್ಯ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬಿ ಎನ್ ಪ್ರಭು ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ.2003-04ರಲ್ಲಿ ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯಲ್ಲಿ ತೆರವಾಗಿದ್ದ 846 ಸಹಾಯಕ ಎಂಜಿನಿಯರ್ ಹಾಗೂ 501 ಕಿರಿಯ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಿತ್ತು.ಈ ಹುದ್ದೆಗಳು ಮೀಸಲಾತಿ ಹುದ್ದೆಗಳಾದ್ದರಿಂದ ಬ್ಯಾಕ್ ಲಾಗ್ ನಿಯಮಗಳನುಸಾರ ನೇಮಕ ಮಾಡಲಾಗಿತ್ತು.ಆದರೆ, ಈ ನೇಮಕಾತಿ ಪ್ರತ್ರಿಕೆಯಲ್ಲಿ ಅವ್ಯವಹಾರ ನಡೆದಿರುವುದು ಮತ್ತು ನಿಯಮಗಳನ್ನು ಗಾಳಿಗೆ ತೂರಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ 2012 ಜುಲೈ 13ರಂದು ನ್ಯಾಯಮೂರ್ತಿ ಎನ್ ಕುಮಾರ್ ನೇತೃತ್ವದ ವಿಭಾಗೀಯ ಪೀಠವು ಎಲ್ಲ ಹುದ್ದೆಗಳನ್ನು ರದ್ದು ಮಾಡಿತ್ತು. ನೂತನವಾಗಿ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಹೈಕೋರ್ಟ್ ನ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.