ಮುಂಬೈ: 5 ವರ್ಷದ ಬಾಲಕಿಯೊಬ್ಬಳು ಕೆಳಗೆ ಬಿದ್ದಿದ್ದ ಪಟಾಕಿಯನ್ನು ಚಾಕೊಲೇಟ್ ಎಂದು ಭಾವಿಸಿ ತಿಂದು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಡೆದಿದೆ.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾದ ಟಿಸಾಂಗಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, 5 ವರ್ಷದ ದಾಮಿನಿ ನಿಕಮ್ ಸಾವನ್ನಪ್ಪಿದ ಬಾಲಕಿಯಾಗಿದ್ದಾಳೆ. ಮನೆಯ ಹೊರಗೆ ಆಟವಾಡುತ್ತಿದ್ದ ದಾಮಿನಿ ನಿಕಮ್ ಆಟವಾಡುತ್ತಿದ್ದ ಸಂದರ್ಭದಲ್ಲಿ ನೆಲದ ಮೇಲೆ ಬಿದ್ದಿದ್ದ ಪಟಾಕಿಯನ್ನು ಚಾಕೊಲೇಟ್ ಅಂತ ಭಾವಿಸಿ ತಿಂದು ಬಿಟ್ಟಿದ್ದಾಳೆ. ನಂತರ ಕೆಲ ಹೊತ್ತಿನ ಬಳಿಕ ಬಾಲಕಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದು, ಮಗುವನ್ನು ಕಂಡ ತಾಯಿ ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ವೈದ್ಯರು ಕೂಡ ಬಾಲಕಿಗೆ ತುರ್ತಾಗಿ ಚಿಕಿತ್ಸೆ ನೀಡಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಖೇಡಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಟಾಕಿಯಯಲ್ಲಿ ವಿಷಕಾರಿ ಮದ್ದನ್ನು ಬಳಕೆ ಮಾಡುವುದರಿಂದ ಅದು ಮಾನವನ ಆರೋಗ್ಯಕ್ಕೆ ತೀವ್ರ ಹಾನಿಕಾರಿ. ಕೇವಲ ಅದನ್ನು ತಿನ್ನುವುದು ಮಾತ್ರವಲ್ಲದೇ ಪಟಾಕಿ ಸ್ಫೋಟದಿಂದ ಏಳುವ ಹೊಗೆ ಕೂಡ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹೀಗಾಗಿ ಪುಟ್ಟ ಮಕ್ಕಳನ್ನು ಪಟಾಕಿಯಿಂದ ಸಾಧ್ಯವಾದಷ್ಟೂ ದೂರವಿಡುವುದನ್ನು ಪೋಷಕರು ತಮ್ಮ ಜವಾಬ್ದಾರಿ ಎಂಬುದನ್ನು ಮರೆಯಬಾರದು.