ನವದೆಹಲಿ: ನನ್ನ ಭಾರತ ಅಲ್ವಾರ್ ನ ಇಮ್ರಾನ್ ಖಾನ್ ನಂತವರ ಕೈಯಲ್ಲಿದೆ ಅಂತ ಮೊನ್ನೆ ಲಂಡನ್ ನ ವೆಂಬ್ಲೆ ಸ್ಟೇಡಿಯಂನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ಆಗ ಭಾರತದಿಂದ ವಲಸೆ ಹೋದ ಮೋದಿಯವರ ಭಾಷಣ ಕೇಳಲು ನೆರೆದಿದ್ದ ಸಾವಿರಾರು ಸಭಿಕರು ಚಪ್ಪಾಳೆ ತಟ್ಟಿದ್ದರು.
ಯಾರು ಈ ಇಮ್ರಾನ್ ಖಾನ್, ವಿಶೇಷತೆಯೇನು ಎಂಬ ಸಂದೇಹ ನಿಮಗೆ ಕಾಡಬಹುದು. ರಾಜಸ್ತಾನದ ಅಲ್ವರ್ ಎಂಬ ಪುಟ್ಟ ಪಟ್ಟಣದ ಗಣಿತ ಅಧ್ಯಾಪಕ ಈ ಇಮ್ರಾನ್ ಖಾನ್. ಪ್ರಧಾನ ಮಂತ್ರಿಯವರ ಡಿಜಿಟಲ್ ಇಂಡಿಯಾ ಮತ್ತು ಇ-ಅಧ್ಯಯನಕ್ಕೆ ಪೂರಕವಾಗಿ ಇಮ್ರಾನ್ ಖಾನ್ ಅವರು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ 52 ಶೈಕ್ಷಣಿಕ ಅಪ್ಲಿಕೇಶನ್ ಗಳನ್ನು ಉಚಿತವಾಗಿ ಕೊಡುಗೆ ನೀಡಿದ್ದಾರೆ. ಇವರ ಈ ಅಪ್ಲಿಕೇಶನ್ ನನ್ನು 30 ಲಕ್ಷ ಜನರು ಡೌನ್ ಲೋಡ್ ಮಾಡಿದ್ದಾರೆ ಮತ್ತು ಪ್ರತಿನಿತ್ಯ 4 ಕೋಟಿ ಜನರು ವೀಕ್ಷಿಸುತ್ತಾರೆ.
ಇವರ ಈ ಪ್ರಯತ್ನವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಶ್ಲಾಘಿಸಿದ್ದು, ಇಮ್ರಾನ್ ಖಾನ್ ಅವರು ಉತ್ತಮ ಕಾರ್ಯ ಮಾಡಿದ್ದಾರೆ. ಅವರು ಅಭಿವೃದ್ಧಿಪಡಿಸಿದ ಶೈಕ್ಷಣಿಕ ಅಪ್ಲಿಕೇಶನ್ ನನ್ನು ನವೆಂಬರ್ 7ರಂದು ದೇಶಕ್ಕೆ ಅರ್ಪಿಸಲಾಗಿದೆ ಎಂದರು.
ದೃಢ ಮನಸ್ಸಿನ ವ್ಯಕ್ತಿಯಾದ ಇಮ್ರಾನ್ ಖಾನ್, ಅಲ್ವಾರ್ ನ ಅಂದಿನ ಜಿಲ್ಲಾಧಿಕಾರಿ ಆಶುತೋಷ್ ಎಟಿ ಪೆಡ್ನೇಕರ್ ಅವರೊಂದಿಗೆ ಸೇರಿ ಶಿಕ್ಷಣಕ್ಕೆ ಸಂಬಂಧಪಟ್ಟ ಅಪ್ಲಿಕೇಶನ್ ನನ್ನು ಅಭಿವೃದ್ಧಿಪಡಿಸಿದರು. ತಮ್ಮ ಕೆಲಸದ ಕ್ರೆಡಿಟ್ ನ್ನು ಪಡ್ನೇಕರ್ ಅವರಿಗೆ ಸಲ್ಲಿಸುತ್ತಾರೆ. ತಾವು ಶಿಕ್ಷಣಕ್ಕೆ ಸಂಬಂಧಿಸಿದ ಅಪ್ಲಿಕೇಶನ್ ನನ್ನು ಅಭಿವೃದ್ಧಿಪಡಿಸಲು ಪಡ್ನೇಕರ್ ಅವರೇ ಸ್ಪೂರ್ತಿ ಎಂದು ಇಮ್ರಾನ್ ಖಾನ್ ಹೇಳುತ್ತಾರೆ.