ಹೈದರಾಬಾದ್: ಹೈದರಾಬಾದ್'ನ ರಾಜೇಂದ್ರ ನಗರದಲ್ಲಿ ಅಪಘಾತವೊಂದು ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಸಾವನ್ನಪ್ಪಿರುವ ಮೂವರಲ್ಲಿ ಓರ್ವ ಆಂಧ್ರಪ್ರದೇಶದ ಮಾಜಿ ಪೋಲೀಸ್ ಮಹಾ ನಿರ್ದೇಶಕರಾಗಿದ್ದ ಹಾಗೂ ಪ್ರಸ್ತುತ ತೆಲಂಗಾಣ ಸರ್ಕಾರದ ವಕ್ತಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಪೆರ್ವಾರಂ ರಾಮುಲು ಅವರ ಮೊಮ್ಮಗನಾದ ವರುಣ್ ಪವಾರ್ (20) ಎಂದು ಹೇಳಲಾಗುತ್ತಿದೆ.
ಕಾರಿನಲ್ಲಿ ಮಾಜಿ ಡಿಜಿಪಿ ಮೊಮ್ಮಗ ಸೇರಿದಂತೆ ನಾಲ್ವರಿದ್ದರು ಎಂದು ಹೇಳಲಾಗುತ್ತಿದ್ದು, ದುರಂತಕ್ಕೆ ವೇಗದ ಚಾಲನೆಯೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅತೀ ವೇಗವಾಗಿ ಬರುತ್ತಿದ್ದ ಕಾರು ಇದ್ದಕ್ಕಿದ್ದಂತೆ ಹಾಲಿನ ಟ್ಯಾಂಕರ್ ಒಂದಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯೊಂದಕ್ಕೆ ಆತನನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಗಾಯಗೊಂಡವನ ಸ್ಥಿತಿ ತೀರಾ ಗಂಭೀರವಾಗಿದೆ ಎಂದು ತಿಳಿದುಬಂದಿದೆ.