ಪಾಟ್ನಾ: ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರ್ಕಾರ ಬಿಹಾರದಲ್ಲಿ ಮದ್ಯ ನಿಷೇಧ ಮಾಡಿದೆ.
ನ.26 ರಂದು ಜೆಡಿಯು ಸರ್ಕಾರ ಮದ್ಯ ನಿಷೇಧ ಆದೇಶ ಹೊರಡಿಸಿದ್ದು, 2016 ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಜೆಡಿಯು ಪಕ್ಷ ಬಿಹಾರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮದ್ಯ ನಿಷೇಧ ಮಾಡುವುದಾಗಿ ನಿತೀಶ್ ಕುಮಾರ್ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು.
ಪ್ರಣಾಳಿಕೆ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಬಿಹಾರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ನ.23 ರಂದು ಬಿಹಾರ ಅಬಕಾರಿ ಸಚಿವ ಅಬ್ದುಲ್ ಜಲಿಲ್ ಹೇಳಿದ್ದರು. ಸರ್ಕಾರ ಕೈಗೊಳ್ಳಲಿರುವ ಕ್ರಮದ ಪರಿಣಾಮ ಆರು ತಿಂಗಳಲ್ಲಿ ಗೋಚರವಾಗಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಪುರುಷರು ಅತಿಯಾಗಿ ಮದ್ಯ ಸೇವಿಸುವುದೂ ಕಾರಣವಾಗಿದ್ದು ಬಿಹಾರದಲ್ಲಿರುವ ದಲಿತ ಮಹಿಳೆಯರು ಮದ್ಯ ನಿಷೇಧಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದರು, ಈ ಹಿನ್ನೆಲೆಯಲ್ಲಿ ಮದ್ಯ ನಿಷೇಧ ಮಾಡಿರುವುದಾಗಿ ಸರ್ಕಾರದ ಪ್ರಕಟಣೆ ತಿಳಿಸಿದೆ.