ನವದೆಹಲಿ: ಅಸಹಿಷ್ಣುತೆ ವಿಚಾರದಲ್ಲಿ ದೇಶ ಬಿಡುವ ಕುರಿತಂತೆ ನಟ ಅಮಿರ್ ಖಾನ್ ನೀಡಿದ್ದ ಹೇಳಿಕೆ ಗುರುವಾರ ಸದನದಲ್ಲಿ ಗದ್ದಲವನ್ನುಂಟು ಮಾಡಿದ್ದು, ಅಧಿವೇಶನದ ಕಲಾಪದಲ್ಲಿ ಅಮಿರ್ ಖಾನ್ ಅವರ ಹೇಳಿಕೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಅಸಹಿಷ್ಣುತೆ ವಿಚಾರ ಕುರಿತಂತೆ ಸದನದಲ್ಲಿ ತೀವ್ರ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಅಮಿರ್ ಖಾನ್ ಅವರ ಹೆಸರನ್ನು ಹೇಳದೆಯೇ ಪರೋಕ್ಷವಾಗಿ ರಾಜನಾಥ್ ಸಿಂಗ್ ಅವರು ತಿರುಗೇಟು ನೀಡಿದ್ದು, ಸಂವಿಧಾನ ಶಿಲ್ಪಿಯಾಗಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಾಕಷ್ಟು ಅವಮಾನ ಹಾಗೂ ತಾರತಮ್ಯಗಳನ್ನು ಎದುರಿಸಿದ್ದರು. ಅವಮಾನವನ್ನು ಸಹಿಸಿಕೊಂಡಿದ್ದರು. ಅವಮಾನವಾಗುತ್ತಿದ್ದರೂ ದೇಶದ ಬಗ್ಗೆ ಅಭಿಮಾನವನ್ನು ಹೊಂದಿದ್ದರು. ಎಂದಿಗೂ ದೇಶ ಬಿಟ್ಟು ಹೋಗುವ ಬಗ್ಗೆ ಮಾತನಾಡಿರಲಿಲ್ಲ ಎಂದು ಹೇಳಿದ್ದಾರೆ.
ಅಮಿರ್ ಖಾನ್ ಕುರಿತಂತೆ ಸದನದಲ್ಲಿ ಚರ್ಚೆಯಾಗುತ್ತಿರುವ ವೇಳೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಅಮಿರ್ ಖಾನ್ ಹೇಳಿಕೆ ಕುರಿತಂತೆ ಮಾತನಾಡಿದ್ದರು. ಅಮಿರ್ ಖಾನ್ ದೇಶ ಬಿಡುತ್ತಾರೆಂದು ಯಾರು ಹೇಳಿದ್ದು? ಅವರು ಎಂದಿಗೂ ದೇಶ ಬಿಡುವ ಬಗ್ಗೆ ಆಲೋಚನೆ ಮಾಡಿರಲಿಲ್ಲ. ನೀವು ಹೊರಗಿನಿಂದ ಬಂದವರು. ನೀವು ಆರ್ಯರು ಹೊರಗಿನಿಂದ ಬಂದವರು. ನಾವು 5000 ವರ್ಷಗಳಿಂದಲೂ ಇಲ್ಲಿಯೇ ಇದ್ದೇವೆ. ಇಲ್ಲಿನ ಎಲ್ಲಾ ಕಷ್ಟಗಳು ಹಾಗೂ ದಾಳಿಗಳನ್ನು ಸಹಿಸಿದ್ದೇವೆ. ನಾವು ಭಾರತದಲ್ಲೇ ಇರುತ್ತೇವೆ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾಜನಾಥ್ ಸಿಂಗ್ ಅವರು ಅಂಬೇಡ್ಕರ್ ಬಗ್ಗೆ ಮಾತನಾಡುವ ಮೂಲಕ ಅಮಿರ್ ಖಾನ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.