ದೇಶ

26/11 ಮುಂಬೈ ದಾಳಿಗೆ ಏಳು ವರ್ಷ: ಹುತಾತ್ಮ ರ ಸ್ಮರಣೆ

Sumana Upadhyaya

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ನೂರಾರು ಜನರು ಸಾವಿಗೀಡಾದ ಘಟನೆ ನಡೆದು ಇಂದಿಗೆ ಏಳು ವರ್ಷಗಳು ಕಳೆದಿವೆ.

ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿಗಳು ಮತ್ತು ಯೋಧರಿಗೆ ಮುಂಬೈಯಲ್ಲಿ ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಅವರ ಸಂಪುಟದ ಸಚಿವರು, ಪೊಲೀಸ್ ಅಧಿಕಾರಿಗಳು, ಸೇನಾಧಿಕಾರಿಗಳು ಗೌರವ ನಮನ ಸಲ್ಲಿಸಿದರು.

2008ರ ನವೆಂಬರ್ 26ರಂದು ಪಾಕಿಸ್ತಾನದಿಂದ 10 ಮಂದಿ ಭಯೋತ್ಪಾದಕರು ಸಮುದ್ರ ಮಾರ್ಗ ಮೂಲಕವಾಗಿ ಮುಂಬೈಗೆ ಬಂದು ಹಠಾತ್ತಾಗಿ ಜನರ ಮೇಲೆ ದಾಳಿ ನಡೆಸಿದರು. ಮುಂಬೈಯ ಪ್ರಸಿದ್ಧ ತಾಜ್ ಹೊಟೇಲ್, ನಾರಿಮನ್ ಪಾಯಿಂಟ್ ಸೇರಿದಂತೆ ಪ್ರಮುಖ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಲಾಗಿತ್ತು. ಘಟನೆಯಲ್ಲಿ 18 ಮಂದಿ ಭದ್ರತಾ ಸಿಬ್ಬಂದಿ ಸೇರಿದಂತೆ 166 ಮಂದಿ ಸಾವನ್ನಪ್ಪಿದ್ದರು. ಅನೇಕ ಮಂದಿ ಗಾಯಗೊಂಡಿದ್ದರು. ಕೋಟಿಗಟ್ಟಲೆ ರೂಪಾಯಿ ನಷ್ಟವುಂಟಾಗಿತ್ತು. ಮೂರು ದಿನಗಳವರೆಗೆ ದಾಳಿ ಮುಂದುವರಿದಿತ್ತು.

ದಾಳಿಯಲ್ಲಿ ಮಹಾರಾಷ್ಟ್ರದ ಉಗ್ರಗಾಮಿ ವಿರೋಧಿ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕೇರ, ಸೇನಾ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮುಂಬೈ ಹೆಚ್ಚುವರಿ ಪೊಲೀಸ್ ಆಯುಕ್ತ ಅಶೋಕ್ ಕಮ್ಟೆ ಮತ್ತು ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಸಾಲಸ್ಕರ್ ಸಾವಿಗೀಡಾದವರಲ್ಲಿ ಪ್ರಮುಖರು.

ದಾಳಿ ನಡೆಸಿದ ಉಗ್ರಗಾಮಿಗಳಲ್ಲಿ ಅಜಬ್ ಕಸಬ್ ನನ್ನು ಮಾತ್ರ ಜೀವಂತವಾಗಿ ಸೆರೆಹಿಡಿಯಲಾಗಿತ್ತು. ನಾಲ್ಕು ವರ್ಷ ಕಳೆದ ನಂತರ 2012, ನವೆಂಬರ್ 21ರಂದು ಆತನಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು.

ಮುಂಬೈ ದಾಳಿಯ ದಿನದ ಹಿನ್ನೆಲೆಯಲ್ಲಿ ಇಡೀ ಮುಂಬೈ ನಗರದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಪ್ರಮುಖ ತಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

SCROLL FOR NEXT