ನವದೆಹಲಿ: ಮಾಜಿ ಕೇಂದ್ರ ಸಚಿವ, ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಪಾಕ್ ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ವಿವಾದಾತ್ಮ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತ ತನ್ನ ಪ್ರದೇಶ ಎಂದು ಹಕ್ಕು ಸ್ಥಾಪಿಸಲು ಯತ್ನಿಸುವುದನ್ನು ಬಿಡಬೇಕು. ಪಾಕ್ ಆಕ್ರಮಿತ ಪ್ರದೇಶ ಪಾಕಿಸ್ತಾನದಲ್ಲೇ ಇರಲಿದೆ ಎಂದು ಹೇಳಿದ್ದಾರೆ. ಪಾಕ್ ಆಕ್ರಮಿತ ಪ್ರದೇಶ ಭಾರತಕ್ಕೆ ಸೇರಿದ್ದು ಎಂದು ಭಾರತ ಸರ್ಕಾರ ಹಲವು ದಶಕಗಳಿಂದ ಹೇಳುತ್ತಲೇ ಬಂದಿದೆ. ಆದರೆ ಅದನ್ನು ಪಡೆಯುವುದಕ್ಕೆ ಯಾವ ಕ್ರಮ ಕೈಗೊಂಡಿದೆ? ಪಿಒಕೆ ಪಾಕಿಸ್ತಾನಕ್ಕೆ ಸೇರಿದ್ದು ಹಾಗೂ ಜಮ್ಮು-ಕಾಶ್ಮೀರ ಭಾರತಕ್ಕೆ ಸೇರಿದ್ದು ಇದು ಹಾಗೆಯೇ ಮುಂದುವರೆಯಲಿದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಪಾಕಿಸ್ತಾನ- ಭಾರತ ದ್ವಿಪಕ್ಷೀಯ ಮಾತುಕತೆ ಬಗ್ಗೆಯೂ ಮಾತನಾಡಿರುವ ಫಾರೂಕ್ ಅಬ್ದುಲ್ಲಾ, ಉಭಯ ರಾಷ್ಟ್ರಗಳು ಸೌಹಾರ್ದಯುತ ಮಾತುಕತೆಗೆ ಮುಂದಾಗಬೇಕು, ಯುದ್ಧ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಈ ಹಿಂದೆ ಪಾಕಿಸ್ತಾನದೊಂದಿಗೆ ಯುದ್ಧ ಮಾಡಿದಾಗಲೂ ಸಕಾರಾತ್ಮಕ ಫಲಿತಾಂಶ ಬಂದಿರಲಿಲ್ಲ ಎಂದು ಫಾರೂಕ್ ಅಬ್ದುಲ್ಲಾ ಅಭಿಪ್ರಾಯಾಟ್ಟಿದ್ದಾರೆ.
ಫಾರೂಕ್ ಅಬ್ದುಲ್ಲಾ ಹೇಳಿಕೆಯನ್ನು ಖಂಡಿಸಿರುವ ಪ್ರಧಾನಿ ಕಾರ್ಯಾಲಯದಲ್ಲಿನ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಭಾರತ ಸರ್ಕಾರ ಪಾಕ್ ಆಕ್ರಮಿತ ಪ್ರದೇಶವನ್ನು ಪಾಕಿಸ್ತಾನದ ಹಿಡಿತದಿಂದ ಮುಕ್ತಗೊಳಿಸುವುದಕ್ಕೆ ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.