ಚೆನ್ನೈ: ಸತತ 15 ದಿನಗಳಿಂದ ಚೆನ್ನೈ ನಗರವನ್ನು ಬಿಟ್ಟೂ ಬಿಡದೆ ಕಾಡುತ್ತಿರುವ ಮಳೆರಾಯ ಮತ್ತೆ ಅಬ್ಬರಿಸಲಿದ್ದಾನೆ ಎಂದು ಕೇಂದ್ರ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಇನ್ನೆರಡು ದಿನದಲ್ಲಿ ತಮಿಳುನಾಡಿನ ದಕ್ಷಿಣ ಒಳನಾಡು ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಸಮೀಪದ ಪಾಂಡಿಡೇರಿಗೂ ಇದೀಗ ಮಳೆ ಭೀತಿ ಎದುರಾಗಿದ್ದು, ಪಾಂಡಿಚೇರಿಯ ಕೆಲ ಪ್ರದೇಶಗಳಲ್ಲಿ ಮಳೆ ಅಬ್ಬರಿಸಲಿದೆ ಎಂದು ತಿಳಿದುಬಂದಿದೆ. ಈ ನಡುವೆ ಕಳೆದ 15 ದಿನಗಳಿಂದ ಸತತವಾಗಿ ಸುರಿದ ಮಳೆ ಚೆನ್ನೈನಗರವನ್ನು ಮುಳುಗಡೆ ಮಾಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಮಳೆ ಸಂಬಂಧಿಸಿದ ಘಟನೆಗಳಲ್ಲಿ ಇದೀಗ ಮತ್ತೆ 7 ಮಂದಿ ಸಾವನ್ನಪ್ಪಿದ್ದು, ಇದರಂತೆ ಮಳೆಯಿಂದಾಗಿ ಸಾವಿನ ಸಂಖ್ಯೆ 184 ಆಗಿದೆ.
ಬಂಗಾಳದಲ್ಲಿ ಆಗ್ನೇಯ ಭಾಗದಲ್ಲಿ ಕಡಿಮೆ ಒತ್ತಡ ಏರ್ಪಟ್ಟಿರುವ ಕಾರಣ ತಮಿಳುನಾಡಿನ ಕರಾವಳಿ ತೀರಾ ಪ್ರದೇಶದಲ್ಲಿ ಶನಿವಾರದವರೆಗೂ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ತಮಿಳುನಾಡಿನ ಕರಾವಳಿ ತೀರ ಪ್ರದೇಶಗಳಲ್ಲಿ ಭಾನುವಾರದಿಂದ ಸೋಮವಾರದವರೆಗೂ ಭಾರೀ ಮಳೆಯಾಗುವ ಸಂಭವವಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ನಿರ್ದೇಶಕ ಎಸ್.ಆರ್.ರಾಮನನ್ ಹೇಳಿದ್ದಾರೆ.