ಮುಂಬೈ: ಪೊಲೀಸ್ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಸ್ಲಿಂ ಸಿಬ್ಬಂದಿ ಕುರಿತ ಮಾಹಿತಿಯನ್ನು ಬಹಿರಂಗಪಡಿಸದಿರಲು 16 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೊ (ಎನ್‍ಸಿಆರ್‍ಬಿ) ಕಳೆದ ವರ್ಷದವರೆಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಮುಸ್ಲಿಂ ಸಿಬ್ಬಂದಿ ವಿವರವನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತಿತ್ತು. ಎನ್‍ಸಿಆರ್‍ಬಿ 2013ರಲ್ಲಿ ಬಿಡುಗಡೆ ಮಾಡಿದ್ದ ವರದಿ ಪ್ರಕಾರ ದೇಶದ ಪೊಲೀಸ್ ಪಡೆಗಳಲ್ಲಿ 1.08 ಲಕ್ಷ ಮುಸ್ಲಿಂ ಸಿಬ್ಬಂದಿ ಇದ್ದು, ಇವರ ಸಂಖ್ಯೆ ಒಟ್ಟು ಪೊಲೀಸ್ ಬಲದ ಶೇ 6.27 ಆಗಿದೆ.
2007ರಲ್ಲಿ ಶೇ 7.55 ಇದ್ದ ಮುಸ್ಲಿಂ ಸಿಬ್ಬಂದಿ ಪ್ರಮಾಣ 2012ರಲ್ಲಿ ಶೇ 6.55ಕ್ಕೆ ಇಳಿದಿತ್ತು. ಎನ್‍ಸಿಆರ್‍ಬಿ ವರದಿಯಲ್ಲಿ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯವನ್ನು ಮಾತ್ರ ಪ್ರತ್ಯೇಕವಾಗಿ ದಾಖಲಿಸಲಾಗುತ್ತಿದ್ದು, 1999ರಲ್ಲಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ ಇದ್ದಾಗ ವರದಿಯನ್ನು ಮೊದಲ ಸಲ ಬಹಿರಂಗಗೊಳಿಸಲಾಗಿತ್ತು.
``ಪೊಲೀಸ್ ಬಲ ಮತ್ತು ಮೂಲಸೌಕರ್ಯದ ದಾಖಲೆ ಆಡಳಿತಾತ್ಮಕ ವಿಚಾರವಾಗಿದ್ದು, ಎನ್‍ಸಿಆರ್‍ಬಿ ಈ ಕುರಿತು ಅಂಕಿ-ಅಂಶ ಸಂಗ್ರಹಿಸುವಂತಿಲ್ಲ. ಈ ಅಂಕಿ-ಅಂಶಗಳನ್ನು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವೂ (ಬಿಪಿಆರ್ ಅಂಡ್ ಡಿ)ಸಂಗ್ರಹಿಸುತ್ತಿದೆ ಮತ್ತು ಇನ್ನುಮುಂದೆ ಇದೊಂದೇ ಘಟಕ ಈ ಕಾರ್ಯ ಮಾಡಲಿದೆ'' ಎಂದು ಎನ್ ಸಿಆರ್‍ಬಿ ಮುಖ್ಯ ಸಾಂಖ್ಯಿಕ ಅಧಿಕಾರಿ ಅಖಿಲೇಶ್ ಕುಮಾರ್ ಹೇಳಿದ್ದಾಗಿ `ಆಂಗ್ಲ ಪತ್ರಿಕೆ' ವರದಿ ಮಾಡಿದೆ.
ಬಿಪಿಆರ್ ಅಂಡ್ ಡಿ ಸಹ ಗೃಹ ಸಚಿವಾಲಯದ ಅಡಿಯಲ್ಲೇ ಕಾರ್ಯನಿರ್ವಹಿಸುತ್ತಿದೆ. ಆದರೆ, ತನಗೆ ಮುಸ್ಲಿಂ ಸಿಬ್ಬಂದಿ ಕುರಿತು ಪ್ರತ್ಯೇಕವಾಗಿ ಮಾಹಿತಿ ಸಂಗ್ರಹಿಸುವ ಮತ್ತು ಅದನ್ನು ಬಹಿರಂಗಗೊಳಿಸುವ ಉದ್ದೇಶ ಇಲ್ಲ ಎಂದು ಬಿಪಿಆರ್ ಅಂಡ್ ಡಿ ಸ್ಪಷ್ಟಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics