ಲಕ್ನೋ: ದಾದ್ರಿಯಲ್ಲಿ ಮೊಹಮ್ಮದ್ ಅಕ್ಲಾಕ್ ಎಂಬ ವ್ಯಕ್ತಿಯನ್ನು ಕೊಂದು ಹಾಕಿರುವ ಘಟನೆ ಬಿಜೆಪಿಯ ಪೂರ್ವ ಯೋಜಿತ ಪಿತೂರಿಯಾಗಿದ್ದು, ರಾಜಕೀಯ ಲಾಭಕ್ಕಾಗಿ ಮಾಡಲಾಗಿದೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ರಾಜ್ಯದಲ್ಲಿ ಅನಗತ್ಯವಾಗಿ ಗಲಭೆ ಎಬ್ಬಿಸಿ ದ್ವೇಷ ಸಾಧಿಸುವವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಅದು ಎಚ್ಚರಿಸಿದೆ.
ಗೋಮಾಂಸ ತಿಂದ ಆರೋಪದ ಮೇಲೆ ದಾದ್ರಿಯಲ್ಲಿರುವ ಮುಸಲ್ಮಾನ ವ್ಯಕ್ತಿಯನ್ನು ಕೊಂದು ಹಾಕಿದ ನಂತರ ಆತನ ಮನೆಗೆ ಭೇಟಿ ಮಾಡುವವರನ್ನು ಯಾರನ್ನೂ ನಾವು ತಡೆದಿಲ್ಲ. ಅಲ್ಲಿಗೆ ಭೇಟಿ ಕೊಟ್ಟ ನಂತರವಾದರೂ ಸತ್ಯ ಮತ್ತು ವಾಸ್ತವ ಏನೆಂದು ಜನತೆಗೆ ಗೊತ್ತಾಗಲಿ ಎಂದು ಉತ್ತರ ಪ್ರದೇಶ ಸರ್ಕಾರದ ಸಚಿವ ಹಾಗೂ ಮುಲಾಯಂ ಸಿಂಗ್ ಯಾದವ್ ಅವರ ಸೋದರ ಶಿವಪಾಲ್ ಯಾದವ್ ಹೇಳಿದ್ದಾರೆ.
ಘಟನೆ ನಡೆದ ಬಳಿಕ ಯಾವೊಬ್ಬ ಸಮಾಜವಾದಿ ಮುಖಂಡರೂ ಕೂಡ ದಾದ್ರಿ ಗ್ರಾಮಕ್ಕೆ ಭೇಟಿ ನೀಡಲಿಲ್ಲ ಏಕೆ ಎಂಬ ಪ್ರಶ್ನೆಗೆ,ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕಲು ಮತ್ತು ಸತ್ಯ ಮರೆಮಾಚಲು ಯತ್ನಿಸುತ್ತಿದೆ ಎಂಬ ಆರೋಪ ಬರುವುದು ಬೇಡ ಎಂಬ ಕಾರಣಕ್ಕೆ ನಾವು ಯಾರೂ ಭೇಟಿ ಮಾಡಿಲ್ಲ ಎನ್ನುತ್ತಾರೆ.
ಅಕ್ಲಾಕ್ ನ ಕುಟುಂಬಿಕರು ಲಕ್ನೋದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು, ಅವರಿಗೆ 45 ಲಕ್ಷ ರೂಪಾಯಿ ಪರಿಹಾರ ಮತ್ತು ಎಲ್ಲಾ ನೆರವು ನೀಡಲಿದ್ದೇವೆ. ಇಂತಹ ಸೂಕ್ಷ್ಮ ವಿಷಯಗಳಲ್ಲಿ ರಾಜಕೀಯ ಮಾಡದೆ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ನುಡಿದರು.
ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುವುದು ನಮ್ಮ ಬಯಕೆ ಮತ್ತು ಉದ್ದೇಶ. ಶಾಂತಿಯನ್ನು ಕದಡಲು ಯತ್ನಿಸಿದವರನ್ನು ಸರ್ಕಾರ ಸುಮ್ಮನೆ ಬಿಡುವುದಿಲ್ಲ. ಮುಜಾಫರ್ ನಗರದ ಘಟನೆ ರಾಜ್ಯದಲ್ಲಿ ಮತ್ತೆಲ್ಲಿಯೂ ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ. ಉತ್ತರ ಪ್ರದೇಶದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ ಅನ್ನುವ ಆರೋಪಗಳು ನಿರಾಧಾರ. ರಾಜ್ಯಕ್ಕೆ ಪ್ರವಾಸಿಗರ ಸಂಖ್ಯೆ ಮತ್ತು ಹೂಡಿಕೆದಾರರ ಸಂಖ್ಯೆ ದಿನದಿನಕ್ಕೆ ಹೆಚ್ಚಾಗುತ್ತಿದೆ. ಶಾಂತಿ, ರಕ್ಷಣೆ ಇಲ್ಲದಿರುತ್ತಿದ್ದರೆ ಈ ಬೆಳವಣಿಗೆ ಸಾಧ್ಯವಾಗುತ್ತಿರಲಿಲ್ಲ ಎಂದರು.
ಎಸ್ಪಿ ಮತ್ತು ಬಿಜೆಪಿ ಪಕ್ಷಗಳು ಕೋಮು ವಿಭಜನೆಗೆ ಹೊರಟಿದೆ ಎಂಬ ಬಿಎಸ್ಪಿಯ ಅರೋಪ ನಿರಾಧಾರ. ಅದು ಉತ್ತರ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಯಾರೊಬ್ಬರೂ ಬಿಎಸ್ಪಿ ಬಗ್ಗೆ ಮಾತನಾಡುತ್ತಿಲ್ಲ. ಅದುವೇ ಎರಡು ಸಲ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿತ್ತು. ಈಗ ಅದರ ವಿರುದ್ಧವೇ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದರು.
2017ನೇ ವಿಧಾನಸಭಾ ಚುನಾವಣೆ ಎಸ್ಪಿ ಮತ್ತು ಬಿಜೆಪಿ ಮಧ್ಯೆ ನಡೆಯುವ ನೇರ ಹಣಾಹಣಿ. ಸಮಾಜವಾದಿ ಪಕ್ಷ ಮುಂದಿನ ಬಾರಿಯೂ ಗೆಲುವು ಸಾಧಿಸುತ್ತದೆ ಎಂಬ ವಿಶ್ವಾಸ ನಮಗಿದೆ. ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನತೆಯ ಮುಂದೆ ಮತಯಾಚಿಸುತ್ತೇವೆ. ಈ ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುತ್ತಾ ಬಂದಿದ್ದೇವೆ ಎಂದು ಶಿವಪಾಲ್ ಯಾದವ್ ತಿಳಿಸಿದ್ದಾರೆ.