ನವದೆಹಲಿ: ಕೇವಲ 4 ವರ್ಷದ ಅವಧಿಯಲ್ಲಿ 11 ಮಂದಿ ಪರಮಾಣು ವಿಜ್ಞಾನಿಗಳು ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಆರ್ ಟಿಐ ಕಾರ್ಯಕರ್ತರೊಬ್ಬರು ಸಲ್ಲಿಕೆ ಮಾಡಿದ್ದ ಅರ್ಜಿಗೆ ಸಂಬಂಧಿಸಿದಂತೆ ಗುರುವಾರ ಕೇಂದ್ರ ಪರಮಾಣ ಶಕ್ತಿ ಇಲಾಖೆ ನೀಡಿರುವ ಉತ್ತರದಲ್ಲಿ ಈ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಇಲಾಖೆ ನೀಡಿರುವ ಮಾಹಿತಿಯಂತೆ 2009-2013ರ ಅಂತರದ ನಾಲ್ಕು ವರ್ಷಗಳಲ್ಲಿ 11 ಮಂದಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ 8 ಮಂದಿ ಹಿರಿಯ ವಿಜ್ಞಾನಿಗಳಾಗಿದ್ದು, ಉಳಿದಂತೆ ಇಂಜಿನಿಯರ್, ಲ್ಯಾಬೊರೇಟರಿಯ ಸಹಾಯಕ ಸೇರಿದಂತೆ ಒಟ್ಟು 11 ಮಂದಿ ಸಾವನ್ನಪ್ಪಿದ್ದಾರೆ.
ಎಲ್ಲ 11 ಮಂದಿ ಒಂದಿಲ್ಲೊಂದು ಕಾರಣದಿಂದಾಗಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕೆಲವರು ರಜೆ ನಿಮಿತ್ತ ಸಮುದ್ರ ತೀರಕ್ಕೆ ಹೋಗಿದ್ದಾಗ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದರೆ, ಮತ್ತೆ ಕೆಲವರು ಪರಮಾಣು ಇಲಾಖೆ ಲ್ಯಾಬ್ ನಲ್ಲಿ ನಡೆದ ಅವಘಡದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಕೆಲವರು ವೈಯುಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪರಮಾಣು ಇಲಾಖೆ ನೀಡಿರುವ ಉತ್ತರದಲ್ಲಿ ಹೇಳಿದೆ.
ಹರ್ಯಾಣ ಮೂಲದ ರಾಹುಲ್ ಸೆಹ್ರಾವತ್ ಎಂಬುವವರು ಕಳೆದ ಸೆಪ್ಟೆಂಬರ್ 21ರಂದು ಈ ಬಗ್ಗೆ ಅರ್ಜಿ ಸಲ್ಲಿಸಿದ್ದು, ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂವರು ಹಿರಿಯ ವಿಜ್ಞಾನಿಗಳು ಕೂಡ ನಿಗೂಢವಾಗಿ ಸಾವನ್ನಪ್ಪಿದ್ದರು. ಇಬ್ಬರು ಆತ್ನಹತ್ಯೆಗೆ ಶರಣಾಗಿದ್ದರೆ ಓರ್ವ ವಿಜ್ಞಾನಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದರು ಎಂದು ಹೇಳಲಾಗುತ್ತಿದೆ. 2010ರಲ್ಲಿ ಸಿ ಗ್ರೂಪ್ ಇಬ್ಬರು ವಿಜ್ಞಾನಿಗಳು ತಮ್ಮ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಶವಗಳನ್ನು ಪರೀಕ್ಷೆಗಾಗಿ ಬಾರ್ಕ್ ಸಂಸ್ಥೆಗೆ ರವಾನಿಸಲಾಗಿತ್ತು. 2012ರಲ್ಲಿಯೂ ಇಂತಹುದೇ ಘಟನೆಯೊಂದು ನಡೆದಿದ್ದು, ರಾವತ್ ಭಾತಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಗ್ರೂಪ್ ವಿಜ್ಞಾನಿ ಮನೆಯಲ್ಲಿ ಸಾವಿಗೀಡಾಗಿದ್ದರು ಎಂದು ಇಲಾಖೆ ತಿಳಿಸಿದೆ.
ಒಂದು ಪ್ರಕರಣದಲ್ಲಿ ಮಾತ್ರ ಶವ ಪರೀಕ್ಷೆ ನಡೆಸಿದ್ದ ಬಾರ್ಕ್ ಸಂಸ್ಥೆ ವಿಜ್ಞಾನಿಗಳು ದೀರ್ಘಕಾಲದ ಅನಾರೋಗ್ಯದ ಬಳಲಿಕೆಯಿಂದಾಗಿ ಸಾವಿಗೀಡಾಗಿದ್ದಾರೆ ಎಂದು ವರದಿ ನೀಡಿತ್ತು. ಇನ್ನುಳಿದ ಪ್ರಕರಣಗಳ ಕುರಿತು ತನಿಖೆ ಮುಂದುವರೆದಿದ್ದು, ಅದರ ವಿವರ ಸದ್ಯಕ್ಕೆ ಲಭ್ಯವಿಲ್ಲ ಎಂದು ಪರಮಾಣ ಇಲಾಖೆ ಹೇಳಿದೆ.
ಒಟ್ಟಾರೆ ಆರ್ ಟಿಐ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಅರ್ಜಿಯೊಂದು ಇದೀಗ ಹೊಸ ಚರ್ಚೆ ಹುಟ್ಟುಹಾಕಿದ್ದು, ದೇಶದ ಹೆಮ್ಮೆಗೆ ಕಾರಣವಾಗಿದ್ದ ವಿಜ್ಞಾನಿಗಳ ನಿಗೂಢ ಸಾವಿಗೆ ಕಾರಣವೇನು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ.