ವಿಧಾನಸಭಾ ಸ್ಪೀಕರ್ ಎನ್. ಶಕ್ತನ್
ತಿರುವನಂತಪುರಂ: ತನ್ನ ಕಾಲಿನಿಂದ ಚಪ್ಪಲಿ ಕಳಚುವಂತೆ ಡ್ರೈವರ್‌ಗೆ ಹೇಳಿ, ಆತನಿಂದ ಚಪ್ಪಲಿ ಕಳಚಿಸಿಕೊಂಡ ಕೇರಳ ವಿಧಾನಸಭಾ ಸ್ಪೀಕರ್ ಎನ್. ಶಕ್ತನ್ ಅವರ ನಡೆ ವಿವಾದಕ್ಕೀಡಾಗಿದೆ. ಶಕ್ತನ್ ಅವರ ವರ್ತನೆಯ ಬಗ್ಗೆ ಪುಂಕಾನುಪುಂಕವಾಗಿ ಟೀಕಾಪ್ರಹಾರಗಳು ನಡೆಯುತ್ತಿವೆ.
ಏತನ್ಮಧ್ಯೆ, ಶಕ್ತನ್ ಸಮಜಾಯಿಷಿ ನೀಡಿ ಮುಂದೆ ಬಂದಿದ್ದಾರೆ. ಅದೇನೆಂದರೆ, ತಾನು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದೇನೆ. ಈ ರೋಗದಿಂದ ಕಣ್ಣಿನ ನರ ಒಡೆದು ರಕ್ತ ಕೂಡಾ ಬಂದಿತ್ತು. ಕೆಲವೊಂದು ಕೆಲಸಗಳನ್ನು ಮಾಡಬಾರದೆಂದು ನಮ್ಮ ವೈದ್ಯರು ಕಟ್ಟು ನಿಟ್ಟಾಗಿ ಹೇಳಿದ್ದಾರೆ. ಭಾರವಾದ ವಸ್ತುಗಳನ್ನು ಎತ್ತಬಾರದು, ಬಗ್ಗಬಾರದು, ಕಣ್ಣಿಗೆ ಬಿಸಿಲು ತಾಗದಂತೆ ನೋಡಿಕೊಳ್ಳಬೇಕು ಎಂದು ವೈದ್ಯರು ನಿರ್ದೇಶನ ನೀಡಿದ್ದಾರೆ. ವೈದ್ಯರು ಹೇಳಿದಂತೆ ಕೇಳದೇ ಇದ್ದರೆ ಮತ್ತೆ ಅನಾರೋಗ್ಯ ಮರುಕಳಿಸುತ್ತದೆ. ಆದ್ದರಿಂದಲೇ ಯಾರಾದರೊಬ್ಬರು ನನ್ನ ಸಹಾಯಕ್ಕೆ ಬೇಕೇ ಬೇಕು. ಸ್ಟ್ರಿಪ್ ಇರುವ ಚಪ್ಪಲಿ ಧರಿಸಿರುವುದರಿಂದ ಅದನ್ನು ಕಳಚುವುದಕ್ಕೆ ಡ್ರೈವರ್ ಬಿಜು ಅವರ ಸಹಾಯ ತೆಗೆದುಕೊಂಡಿದ್ದೇನೆ ಎಂದು ಸ್ಪೀಕರ್ ಹೇಳಿದ್ದಾರೆ.
ಬುಧವಾರ ಕೇರಳ ವಿಧಾನಸಭಾ ಆವರಣದಲ್ಲಿ ಭತ್ತಕೊಯ್ಯುವ ಕಾರ್ಯಕ್ರಮಕ್ಕೆ ಆಗಮಿಸಿದಾಗ ಸ್ಪೀಕರ್ ಶಕ್ತನ್ ತನ್ನ ಚಪ್ಪಲಿ ಕಳಚಿಕೊಡುವಂತೆ ಡ್ರೈವರ್‌ಗೆ ಹೇಳಿದ್ದರು. ಹೀಗೆ ಡ್ರೈವರ್, ಸ್ಪೀಕರ್ ಅವರ ಕಾಲ ಬಳಿ ಕೂತು ಚಪ್ಪಲಿ ಕಳಚಿಕೊಡುತ್ತಿರುವ ಫೋಟೋ ಸಮೂಹ ಮಾಧ್ಯಮ ಮತ್ತು ಸಾಮಾಜಿಕ ತಾಣಗಳಲ್ಲಿ ಹರಿದಾಡಿ ವಿವಾದಕ್ಕೆ ಹೆಚ್ಚಿನ ಬಿಸಿ ತಟ್ಟುವಂತೆ ಮಾಡಿತ್ತು.