ಮುಂಬೈ: 26 /11 ಮಾದರಿಯಲ್ಲಿ ದಾಳಿ ನಡೆಸಲು ಪಾಕಿಸ್ತಾನದಿಂದ ಮೂವರು ಭಯೋತ್ಪಾದಕರು ಮುಂಬೈ ಗೆ ನುಸುಳಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಬಗ್ಗೆ ಬಿಜೆಪಿ ಅಂಗಪಕ್ಷ ಶಿವಸೇನೆ ವ್ಯಂಗ್ಯ ಧಾಟಿಯಲ್ಲಿ ಲೇಖನ ಪ್ರಕಟಿಸಿದೆ.
ಪಾಕಿಸ್ತಾನದಿಂದ ಇಲ್ಲಿಗೆ ಯಾರೇ ಬಂದರೂ ಅವರು ಶಾಂತಿಯ ದೂತರಾಗಿರುತ್ತಾರೆ. ಆದ್ದರಿಂದ ಈಗ ನುಸುಳಿದ್ದಾರೆ ಎನ್ನಲಾದ ಮೂವರು ಉಗ್ರರನ್ನು ಶಾಂತಿ ದೂತರಂತೆಯೇ ಸ್ವಾಗತಿಸಬೇಕು ಎಂದು ಶಿವಸೇನೆ ಹೇಳಿದೆ. ನವರಾತ್ರಿ ಹಾಗೂ ದೀಪಾವಳಿ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ 26 /11 ಮಾದರಿಯಲ್ಲಿ ದಾಳಿ ನಡೆಸುವ ಉದ್ದೇಶದಿಂದ ಉಗ್ರರು ನುಸುಳಿದ್ದಾರೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು.
ಈ ಬಗ್ಗೆ ಸಾಮ್ನಾ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿರುವ ಶಿವಸೇನೆ ಪಾಕಿಸ್ತಾನದಿಂದ ಬರುವವರಿಂದ ದೇಶವನ್ನು ರಕ್ಷಿಸಲು ಪಾಕಿಸ್ತಾನಕ್ಕೆ ಪ್ರೀತಿಪಾತ್ರವಾದ ಶಾಂತಿಯ ರಾಯಭಾರಿ ಜವಾಬ್ದಾರಿ ಹೊತ್ತಿದ್ದಾರೆ. ಆದ್ದರಿಂದ ಯಾವುದೇ ಅಪಾಯ ಇಲ್ಲ ಎಂದು ಪರೋಕ್ಷವಾಗಿ ಸುಧೀಂದ್ರ ಕುಲಕರ್ಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಪಾಕಿಸ್ತಾನದಿಂದ ಬರುವ ಪ್ರತಿಯೊಬ್ಬರನ್ನೂ ಶಾಂತಿ ದೂತರೆಂದು ಪರಿಗಣಿಸುವ ಹಿನ್ನೆಲೆಯಲ್ಲಿ ಈಗ ಮುಂಬೈ ಪ್ರವೇಶಿಸಿರುವ ಮೂವರು ಉಗ್ರರನ್ನೂ ಶಾಂತಿ ದೂತರೆಂದೇ ಪರಿಗಣಿಸಿ, ಕೆಂಪು ರತ್ನಗಂಬಳಿ ಹಾಕಿ ಸ್ವಾಗತಿಸಬೇಕು ಹಾಗೂ ಅತ್ಯುನ್ನತ ಭದ್ರತೆ ಒದಗಿಸಬೇಕು ಎಂದು ಶಿವಸೇನೆ ವ್ಯಂಗ್ಯವಾಡಿದೆ.
ಒಂದು ವೇಳೆ ಉಗ್ರರ ದಾಳಿ ನಡೆದು ನೂರಾರು ಜನರು ಸಾವನ್ನಪ್ಪಿದ್ದರೆ, ಪಾಕಿಸ್ತಾನ- ಭಾರತದ ನಡುವೆ ಇರುವ ಸಾಂಸ್ಕೃತಿಕ-ರಾಜಕೀಯ ಸಂಬಂಧಗಳಿಗೆ ಧಕ್ಕೆ ಉಂಟಾಗುವ ಘಟನೆ ಎಂದು ಹೇಳಬಾರದು, ತ್ಯಾಗ ಮತ್ತು ಸಹಿಷ್ಣುತೆಯನ್ನು ಪ್ರದರ್ಶಿಸಬೇಕು ಎಂದು ಶಿವಸೇನೆ ಹೇಳಿದೆ.
ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧ ಮುಂದುವರೆಸಲು, ಭಾರತೀಯರು ಓಂ ಶಾಂತಿ ಓಂ ಪಠಿಸಬಾರದು, ಅತಿಥಿ ದೇವೋ ಭವ ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕು, ಆದ್ದರಿಂದ ಮಹಾರಾಷ್ಟ್ರ ಸರ್ಕಾರ ಭಯೋತ್ಪಾದಕರನ್ನು ಸ್ವಾಗತಿಸಬೇಕು ಎಂದು ಶಿವಸೇನೆ ಕರೆ ನೀಡಿದೆ.