ಕೊಯಮತ್ತೂರು: ಸಂಪರ್ಕ ಏರ್ಪಡಲೆಂದು ಕಂಡುಹಿಡಿದ ಮೊಬೈಲ್ ಮತ್ತು ಫೇಸ್‍ಬುಕ್, ವಾಟ್ಸಾಪ್ ಗಳು ಸಂಪರ್ಕ ಕಟ್ ಮಾಡಲು ಕಾರಣವಾಗಿವೆ. ಡಿವೋರ್ಸುಗಳು, ಬ್ರೇಕ್‍ಅಪ್‍ಗಳು, ಸ್ನೇಹಿತರ ನಡುವೆ ಜಗಳ, ಗುಂಪುಗಾರಿಕೆ ಎಲ್ಲವನ್ನೂ ಹುಟ್ಟುಹಾಕಿದ ಸಾಮಾಜಿಕ ಜಾಲತಾಣದ ಅತಿರೇಕಗಳು ಇದೀಗ ಸಾವಿಗೂ ಮುನ್ನುಡಿ ಬರೆಯಲಾರಂಭಿಸಿವೆ. ಫೇಸ್ ಬುಕ್, ವಾಟ್ಸಾಪ್ ಅಡಿಕ್ಷನ್ ಇದೀಗ ಕೇರಳದ ನವವಿವಾಹಿತೆಯೊಬ್ಬಳನ್ನು ಬಲಿ ತೆಗೆದುಕೊಂಡಿದೆ. 20ರ ಹರೆಯದ ಅಪರ್ಣಾ ಎಂಬಾಕೆ ದಿನದ ಮೂರೂ ಹೊತ್ತೂ ಮೊಬೈಲಿ ಫೋನ್ನಲ್ಲಿ ತಲೀನಳಾಗಿರುತ್ತಿದ್ದಳೆಂದು ಆಕೆಯ ಪತಿಗೆ ಕಿರಿಕಿರಿ. ಅನೇಕ ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಮದುವೆಯಾದ ಹೊಸತರಲ್ಲೇ ಈ ರೀತಿ ವರ್ತನೆ ಕಂಡು ಬೇಸತ್ತ ಪತಿ ಗದರಿಸಿದ್ದಾನೆ. ಲಾರಿ ಡ್ರೈವರ್ ಪತಿ ಕುಮಾರ್ ಈ ಫೇಸ್‍ಬುಕ್ ಚಟ ಬಿಡಿಸಲೇಬೇಕೆಂದು ಅಂದು ಆಕೆಗೆ ಸರಿಯಾಗಿ ಬಯ್ದು, ಆಕೆಯ ಮೊಬೈಲ್ ಕಿತ್ತುಕೊಂಡು ತನ್ನೊಂದಿಗೆ ಒಯ್ದಿದ್ದಾನೆ. ಇದರಿಂದ ತೀವ್ರವಾಗಿ ನೊಂದ ಅಪರ್ಣಾ ತನ್ನ ಇನ್ನೊಂದು ಫೋನ್‍ನಿಂದ ಅಣ್ಣನಿಗೆ ಕರೆಮಾಡಿ ತನ್ನ ಬೇಸರ ಹೇಳಿಕೊಂಡು ಆತನ ಸಮಾಧಾನದ ನುಡಿಗೂ ಕಾಯದೆ, ಮನೆಯ ಬಾಗಿಲು ಹಾಕಿ, ದುಪ್ಪಟ್ಟಾದಿಂದಲೇ ನೇಣು-
ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಇದರ ಬೆನ್ನಲ್ಲೇ ಗಂಡ ಕೂಡ ಕಟ್ಟಡದಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.