ರಾಜ್ ಕೋಟ್: ತಮ್ಮ ಸಮುದಾಯ ಜನರಿಗೆ ಪಂದ್ಯಾವಳಿಯ ಟಿಕೆಟ್ ನೀಡಲಿಲ್ಲವೆಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದ ಪಟೇಲ್ ಸಮುದಾಯದ ಹೋರಾಟ ಹಾರ್ದಿಕ್ ಪಟೇಲ್ ನನ್ನು ರಾಜ್ ಕೋಟ್ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ನಿನ್ನೆಯಷ್ಟೇ ಭಾರತ-ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದ್ದು, ಪಂದ್ಯಾಟದ ಟಿಕೆಟ್ ಗಳನ್ನು ಈಗಾಗಲೇ ಬಿಜೆಪಿ ಕಾರ್ಯಕರ್ತರಿಗೆ ಮಾರಲಾಗಿದೆ. ಪಟೇಲ್ ಸಮುದಾಯದ ಸದಸ್ಯರಿಗೆ ಕ್ರಿಕೆಟ್ ವೀಕ್ಷಣೆಗೆ ಟಿಕೆಟ್ ನೀಡಿಲ್ಲ ಎಂದು ಆರೋಪಿಸಿದ್ದ ಹಾರ್ದಿಕ್ ಪಟೇಲ್ ಅ.18ರಂದು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯಾವಳಿಗೆ ಪಟೇಲ್ ಸಮುದಾಯ ತಡೆ ಬೇಲಿ ನಿರ್ಮಿಸಲಿದ್ದು, ಎರಡೂ ತಂಡಗಳನ್ನು ಮಾರ್ಗದ ನಡುವೆಯೇ ತಡೆಯಲಾಗುತ್ತದೆ ಎಂದು ಬೆದರಿಕೆಯೊಡ್ಡಿದ್ದರು.
ಹೀಗಾಗಿ ಪಂದ್ಯಕ್ಕೆ ಯಾವುದೇ ತಡೆಯುಂಟಾಗದಂತೆ ಎಚ್ಚರಿಕೆವಹಿಸಿದ್ದ ಅಧಿಕಾರಿಗಳು ಸ್ಟೇಡಿಯಂ ಸುತ್ತ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದ್ದರು. ಅಲ್ಲದೆ, ಕ್ರಿಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ರವರೆಗೆ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದರು.
ಪಂದ್ಯಾವಳಿ ಆರಂಭವಾಗುವುದಕ್ಕೂ ಮುಂಚೆಯೇ ಸ್ಟೇಡಿಯಂನ ಹೊರಾಂಗಣದಲ್ಲಿ ಪ್ರತಿಭಟನೆಗಳಿದಿದ್ದ ಹಾರ್ದಿಕ್ ಪಟೇಲ್ ರನ್ನು ಇದೀಗ ರಾಜ್ ಕೋಟ್ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಹಾರ್ದಿಕ್ ಪಟೇಲ್, ತನಗೆ ಹಾಗೂ ತಮ್ಮ ಸಮುದಾಯ ಜನರಿಗೆ ಪಂದ್ಯಾವಳಿ ವೀಕ್ಷಿಸಲು ಟಿಕೆಟ್ ದೊರೆತಿದ್ದು, ಶೀಘ್ರದಲ್ಲೇ ಸ್ಟೇಡಿಯಂ ಒಳ ಹೋಗಲಾಗುತ್ತದೆ ಎಂದು ಹೇಳಿದ್ದಾರೆ.