ನವದೆಹಲಿ: ಹರ್ಯಾಣದಲ್ಲಿ ನಡೆದಿರುವ ಇಬ್ಬರು ದಲಿತ ಮಕ್ಕಳ ಹತ್ಯೆಗೆ ಕೇಂದ್ರ ಸರ್ಕಾರ ಹೊಣೆಯಲ್ಲ ಎಂದು ಕೇಂದ್ರ ಸಚಿವ ವಿ.ಕೆ ಸಿಂಗ್ ಹೇಳಿದ್ದಾರೆ.
ಪ್ರತಿಯೊಂದು ಘಟನೆಗೂ ಕೇಂದ್ರ ಸರ್ಕಾರವನ್ನು ಹೊಣೆ ಮಾಡಲು ಸಾಧ್ಯವಿಲ್ಲ. ಯಾರಾದರೂ ನಾಯಿ ಮೇಲೆ ಕಲ್ಲೆಸೆದರೆ ಅದಕ್ಕೂ ಸಹ ಕೇಂದ್ರ ಸರ್ಕಾರವನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ವಿಕೆ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹರ್ಯಾಣದಲ್ಲಿ ನಡೆದಿರುವ ಹತ್ಯೆ ಪ್ರಕರಣ ಸರ್ಕಾರದ ವೈಫಲ್ಯವಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿರಿವ ವಿಕೆ ಸಿಂಗ್, ಹತ್ಯೆ ಪ್ರಕರಣಕ್ಕೂ ಸರ್ಕಾರಕ್ಕೂ ಸಂಬಂಧ ಕಲ್ಪಿಸಬೇಡಿ. ಈ ಘಟನೆ ಎರಡು ಕುಟುಂಬಗಳ ನಡುವಿನ ದ್ವೇಷಕ್ಕೆ ಸಂಬಂಧಿಸಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಸೋಮವಾರ ಹರ್ಯಾಣಾದ ಫಾಜಿಯಾಬಾದ್ ನಲ್ಲಿ ದಲಿತ ಕುಟುಂಬದ ಮೇಲೆ ಸವರ್ಣಿಯರು ದಾಳಿ ನಡೆಸಿದ್ದ ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಈ ಪ್ರಕರಣದ ಬಗ್ಗೆ ಹರ್ಯಾಣ ಸರ್ಕಾರ ಸಿಬಿಐ ತನಿಖೆಗೆ ಆದೇಶ ನೀಡಿದೆ.