ಮಿಜೋರಾಂ: ಖಾಸಗಿ ಬಸ್ಸೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕನಿಷ್ಠ 10 ಮಂದಿ ಸಾವಿಗೀಡಾಗಿ ಇತರ 9 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಮಿಜೋರಾಂನಲ್ಲಿ ನಡೆದಿದೆ.
ಮಿಜೋರಾಂನ ಲಾಂಗ್ ತ್ಲೈ ನಿಂದ ರಾಜಧಾನಿ ಐಜವಲ್ ಕಡೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ಸು ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ರಾಮ್ಲೈತುಯಿ ಗ್ರಾಮದಲ್ಲಿ ಕಂದಕಕ್ಕೆ ಉರುಳಿಬಿತ್ತು.
ಅಪಘಾತ ಸಂಭವಿಸಿದ ಕೂಡಲೇ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿ ಪೊಲೀಸರು ಮತ್ತು ರಾಜ್ಯ ವಿಪತ್ತು ತುರ್ತು ಪಡೆಯ ಸಿಬ್ಬಂದಿಗಳ ನೆರವಿನಿಂದ ಶವಗಳನ್ನು ಹೊರತೆಗೆದು ಬೇರೆಡೆಗೆ ಸಾಗಿಸಿದರು. ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಬಸ್ ಉರುಳಿ ಬೀಳಲು ಚಾಲಕ ಮದ್ಯಪಾನ ಮಾಡಿರುವುದು ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದರೂ, ಎದುರಿನಿಂದ ವೇಗವಾಗಿ ಬಂದ ಟ್ರಕ್ ಜೊತೆ ಢಿಕ್ಕಿಯನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ಬಸ್ಸು ಉರುಳಿ ಪಕ್ಕದ ಕಂದಕಕ್ಕೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.