ದೇಶ

ಕದನ ವಿರಾಮ ಉಲ್ಲಂಘನೆ: ಭಾರತಕ್ಕೆ ಸಮನ್ಸ್ ಜಾರಿ ಮಾಡಿದ ಪಾಕ್

ಇಸ್ಲಾಮಾಬಾದ್: ಪದೇ ಪದೇ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ, ತನ್ನ ಉದ್ಧಟತನವನ್ನು ಪ್ರದರ್ಶಿಸುತ್ತಿರುವ ಪಾಕಿಸ್ತಾನವು ಇದೀಗ ತನ್ನದೇನು ತಪ್ಪಿಲ್ಲ, ತಾನೇನನ್ನೂ ಮಾಡಿಲ್ಲ ಎಂಬಂತೆ ಇದೀಗ ಗಡಿಯಲ್ಲಿ ಭಾರತವೇ ಕದನ ವಿರಾಮ ಉಲ್ಲಂಘಿಸುತ್ತಿದೆ ಹೇಳಿ ಸೋಮವಾರ ಸಮನ್ಸ್ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ.

ಭಾರತೀಯ ಉಪ ಹೈಕಮಿಷನರ್ ಜೆ.ಪಿ.ಸಿಂಗ್ ಅವರಿಗೆ ದಕ್ಷಿಣ ಏಷ್ಯಾ ಮತ್ತು ಸಾರ್ಕ್ ನಿರ್ದೇಶಕ ಡಾ.ಮುಹಮ್ಮದ್ ಫೈಸಲ್ ಅವರು ಸಮನ್ಸ್ ಜಾರಿ ಮಾಡಿದ್ದು, ಭಾರತ ಗಡಿಯಲ್ಲಿ ಈಗಾಗಲೇ ಹಲವು ದಿನಗಳಿಂದಲೂ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಬಂದಿದೆ. ಇದರಂತೆ ಇದೇ ತಿಂಗಳ 23, 24 ಮತ್ತು 25 ರಂದು ಶಖರ್ಗರ್ಹ್ ಮತ್ತು ಜಫರ್ವಾಲ್ ಸೆಕ್ಟರ್ ಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ಮಾಡಿದೆ. ಇದರ ಪರಿಣಾಮವಾಗಿ ಗಡಿಯಲ್ಲಿ ಓರ್ವ ಯುವತಿ ಸೇರಿದಂತೆ 3 ನಾಗರೀಕರು ಸಾವನ್ನಪ್ಪಿದ್ದಾರೆ. ಅಲ್ಲದೆ, 23 ಮಂದಿ ಗಂಭೀರವಾಗಿ ಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಪದೇ ಪದೇ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಯಾಗುತ್ತಿರುವುದೊಂದು ಹೇಸಿಗೆಯ ಸಂಗತಿಯಾಗಿದ್ದು, ಶೋಚನೀಯ ವಿಷಯವಾಗಿದೆ. ಹೀಗಾಗಿ 2003ರಂತೆ ಕದನ ವಿರಾಮ ಉಲ್ಲಂಘನೆ ಕುರಿತ ಒಪ್ಪಂದವನ್ನು ಭಾರತ ಗೌರವಿಸಬೇಕಿದ್ದು, ಕೂಡಲೇ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುವುದನ್ನು ಬಿಡಬೇಕು ಎಂದು ಹೇಳಿದ್ದಾರೆ.

ಇತ್ತ ಪಾಕಿಸ್ತಾನವು ಭಾರತಕ್ಕೆ ಸಮನ್ಸ್ ಜಾರಿ ಮಾಡಿದ್ದರೆ, ಮತ್ತೊಂದೆಡೆ ಸಾಂಬಾ ಮತ್ತು ಕಥುವಾ ಜಿಲ್ಲೆಯಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು, ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇದರ ಪರಿಣಾಮವಾಗಿ ಇಂದೂ ಸಹ ಓರ್ವ ನಾಗರೀಕ ಗಾಯಗೊಂಡಿದ್ದಾನೆಂದು ತಿಳಿದುಬಂದಿದೆ.

SCROLL FOR NEXT